
ಜಕ್ರಿಬೆಟ್ಟು ಡ್ಯಾಮ್‌ನಲ್ಲಿ ನೀರು ನಿಲುಗಡೆ: ರೈತರ ಅಡಕೆ ತೋಟಕ್ಕೆ ನುಗ್ಗಿದ ನೀರು
ಬಂಟ್ವಾಳ: ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿ ನದಿಗೆ ಬಂಟ್ವಾಳದ ಜಕ್ರಿಬೆಟ್ಡುವಿನಲ್ಲಿ ನಿರ್ಮಾಣಗೊಂಡಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು (ಬ್ರಿಡ್ಜ್ ಕಂ ಬ್ಯಾರೇಜ್)ನಲ್ಲಿ ಇದೇ ಮೊದಲ ಬಾರಿಗೆ ಗೇಟ್ ಹಾಕಿ ನೀರು ಸಂಗ್ರಹಿಸಿರುವ ಹಿನ್ನಲೆಯಲ್ಲಿ ನೀರು ತುಂಬಿ ಸಮೀಪದ ಮಣಿಹಳ್ಳ, ಪಣೆಕಲಪಡ್ಪ ಭಾಗದ ಸುಮಾರು ಏಳರಿಂದ ಎಂಟು ರೈತರ ಅಡಕೆ ತೋಟಗಳಿಗೆ ನೀರು ನುಗ್ಗಿದ್ದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಜಕ್ರಿಬೆಟ್ಡುವಿನ ಈ ಸೇತುವೆ ಸಹಿತ ಕಿಂಡಿ ಅಣೆಕಟ್ಟುವಿನಲ್ಲಿ 5 ಮೀ.ನಷ್ಟು ನೀರು ಶೇಖರಣೆಯಾಗಿರುವುದರ ಪರಿಣಾಮ ಡ್ಯಾಂನಿಂದ ಸುಮಾರು ಮುಕ್ಕಾಲು ಕಿ.ಮೀ. ದೂರದ ಮಣಿಹಳ್ಳಪಣೆಕಲಪಡ್ಪು ಭಾಗದ ರೈತರ ಅಡಕೆ ತೋಟಕ್ಕೆ ನೀರು ನುಗ್ಗಿದ್ದು, ಇಲ್ಲಿನ ಸರಿಸುಮಾರು 9 ಎಕ್ರೆಯಷ್ಟು ತೋಟಗಳಲ್ಲಿ ಒಂದೂವರೆ ಅಡಿಯಷ್ಟು ನೀರು ನಿಲುಗಡೆಯಾಗಿದೆ ಎಂದು ಸಂತ್ರಸ್ಥ ರೈತರು ಆರೋಪಿಸಿದ್ದಾರೆ.
ನದಿಯ ಹಿನ್ನೀರು ಮಣಿಹಳ್ಳದ ಕಿರುಸೇತುವೆಯ ತೋಡಿನಲ್ಲೂ ತುಂಬಿದ್ದು, ತೋಡಿನ ಎರಡೂ ಬದಿಯ ಕೃಷಿ ತೋಟಗಳಿಗೆ ನೀರು ನುಗ್ಗಿದೆ. ಇಲ್ಲಿನ ಪ್ರಗತಿಪರ ಕೃಷಿಕ ವಿಲ್ಪ್ರೆಡ್ ಸಿಕ್ವೇರಾ ಅವರ ಎರಡು ಎಕ್ರೆ ಅಡಕೆ ತೋಟದಲ್ಲಿ 1000ಕ್ಕು ಅಧಿಕ ಅಡಕೆ ಮರಗಳು ಮುಳುಗಡೆಯಾಗಿದ್ದು, ಸುತ್ತಮುತ್ತಲಿನ ಲಿಲ್ಲಿ ಸಿಕ್ವೇರಾ, ಅಂತೋನಿ ಅಲ್ಬುಕಕ್೯, ಮೆಲ್ವಿನ್, ಫೆಲಿಕ್ಸ್, ಸುರೇಶ್ ಶೆಟ್ಟಿ, ನಿಖಿಲ್, ಕಿಶೋರ್ ಸೇರಿದಂತೆ ಇನ್ನು ಹಲವರ ತೋಟದಲ್ಲಿಯು ನೀರು ನಿಲುಗಡೆಯಾಗಿದೆ.
ಡ್ಯಾಂನಲ್ಲಿ ನೀರು ನಿಲುಗಡೆಗೊಳಿಸುವುದರಿಂದ ನದಿ ಕಿನಾರೆಯ ಕೃಷಿ ತೋಟಗಳಿಗೆ ಅನುಕೂಲವಾಗುವ ಜತೆಗೆ ಸುತ್ತಮುತ್ತಲ ಪ್ರದೇಶದ ಅಂತರ್ಜಲ ವೃದ್ಧಿಗೂ ನೆರವಾಗಿದೆಯಾದರೂ ಇದೇ ರೀತಿ ಮುಂದುವರಿದರೆ ಅಡಿಕೆ ಮರಗಳು ಹಳದಿ ಬಣ್ಣಕ್ಕೆ ತಿರುಗಿ ನಾಶವಾಗುವ ಆತಂಕವನ್ನು ಕೃಷಿಕರು ವ್ಯಕ್ತಪಡಿಸುತ್ತಿದ್ದಾರೆ.
ಡ್ಯಾಮ್ ನಿರ್ಮಾಣದ ಸಂದರ್ಭದಲ್ಲಿ ಹಲವು ತೋಟಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ಆಗ ಯಾವುದೇ ತೋಟಗಳು ಮುಳುಗಡೆಯಾಗುವುದಿಲ್ಲ ಎಂಬ ಭರವಸೆ ನೀಡಿದ್ದರು. ಜತೆಗೆ ತಡೆಗೋಡೆ ನಿರ್ಮಿಸುವುದಾಗಿಯೂ ಹೇಳಿದ್ದರು. ಈಗ ತೋಟದಲ್ಲಿ ನೀರು ತುಂಬಿದ್ದು, ನಾವು ಕೃಷಿಯನ್ನೇ ನಂಬಿ ಬದುಕುತ್ತಿದ್ದೇವೆ ಎಂದು ಕೃಷಿಕರ ವಿಲ್ಫ್ರೆಡ್ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು (ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೀಗ ಗೇಟ್ ಹಾಕಿ ನೀರು ಸಂಗ್ರಹವನ್ನು ಈಗಾಗಲೇ ಆರಂಭಿಸಲಾಗಿದ್ದು, ಒಟ್ಟು 5.50 ಮೀ. ಎತ್ತರದ ಕಿಂಡಿ ಅಣೆಕಟ್ಟಿನಲ್ಲಿ ಈಗ 5 ಮೀ.ನಷ್ಟ ನೀರು ಸಂಗ್ರಹಗೊಂಡಿದೆ ಎಂದು ತಿಳಿದು ಬಂದಿದೆ.
ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಉದ್ದ 351.25 ಮೀ. ಹಾಗೂ 5.50 ಮೀ. ಎತ್ತರವಿದ್ದು, ಪೂರ್ತಿ ಗೇಟ್ ಅಳವಡಿಸಿದರೆ 166 ಎಂ.ಸಿಎಫ್‌ಟಿ ನೀರು ಶೇಖರಣೆಗೊಂಡು ಸುಮಾರು 5 ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸಲಿದೆ.