
ಪುಸ್ತಕ ಪ್ರೇಮಿಗಳ ದಿನಾಚರಣೆ: 10 ಕೃತಿಗಳ ಅನಾವರಣ
ಮಂಗಳೂರು: ಪ್ರೇಮಿಗಳ ದಿನದಂದು ನಗರದ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗರದ ಪುರಭವನದಲ್ಲಿ ಪುಸ್ತಕ ಪ್ರೇಮಿಗಳ ದಿನ ಆಚರಿಸಲಾಯಿತು. ಈ ಸಂದರ್ಭ 10 ಕೃತಿಗಳು ಅನಾವರಣಗೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ಪುಸ್ತಕ ಪ್ರೇಮಿಗಳ ದಿನ ಆಚರಣೆಯ ಮೂಲಕ ಸಮಾಜಕ್ಕೆ ವಿನೂತನ ಸಂದೇಶ ನೀಡುವ ಪ್ರಯತ್ನ ಮಾಡಿದ್ದು, ಸಾಹಿತ್ಯ ಹಾಗೂ ಪುಸ್ತಕ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯವನ್ನು ಕೂಡಾ ಈ ಮೂಲಕ ಮಾಡಿದೆ. ಇದರಿಂದ ‘ಜ್ಞಾನದ ಸಂಸ್ಕೃತಿ ಬೆಳೆಯುವಂತಾಗಬೇಕು. ಅದಕ್ಕೆ ಪುಸ್ತಕ ಓದುವ ಮನೋಭೂಮಿಕೆ ನಮ್ಮಲ್ಲಿ ಬೆಳೆಯಬೇಕು. ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಲೋಕದ ಸಂಗತಿಯನ್ನು ಪುಸ್ತಕದ ಮೂಲಕ ಅರಿತುಕೊಳ್ಳಬೇಕು’ ಎಂದು ಹೇಳಿದರು.
ಸ್ವ ಅನುಭವ ವ್ಯಕ್ತಿಗೆ ದಾರಿ ತೋರಿದರೆ ಪರಾನುಭವ ಇದ್ದರೆ ಬದುಕು ಇನ್ನಷ್ಟು ವಿಸ್ತಾರದ ಸ್ವರೂಪ ಪಡೆಯಲು ಸಾಧ್ಯ. ಬರವಣಿಗೆ/ಪುಸ್ತಕದ ಮೂಲಕ ಪರಾನುಭವ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ದೂರು ಕೇಳಿಬರುತ್ತಿರುವುದು ಹೌದು. ಆದರೆ, ಸಹಸ್ರಾರು ಪುಸ್ತಕಗಳು ನಿತ್ಯ ಪ್ರಕಟವಾಗುತ್ತಿರು ವುದನ್ನು ಕಾಣುವಾಗ ಪುಸ್ತಕ ಲೋಕದಲ್ಲಿ ಆಶಾದಾಯಕ ವಾತಾವರಣ ಕಾಣಲು ಸಾಧ್ಯ ಎಂದವರು ಹೇಳಿದರು.
ಚಾಲನೆ ನೀಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ‘ಮಂಗಳೂರು ವಿವಿಧ ವಿಚಾರದಲ್ಲಿ ಜಗತ್ತಿಗೆ ಮಾಡೆಲ್ ಆಗಿದೆ. ಇದೀಗ ಪ್ರೇಮಿಗಳ ದಿನವನ್ನು ಪುಸ್ತಕ ಪ್ರೇಮಿಗಳ ದಿನವನ್ನಾಗಿ ಬದಲಾಯಿಸುವ ಮೂಲಕ ಜಗತ್ತಿಗೆ ಒಂದು ಮಾಡೆಲ್ ಪರಿಚಯಿಸಿದಂತಾಗಿದೆ’ ಎಂದರು.
ಚಹಾ ಅಂಗಡಿಯಲ್ಲೇ 10 ಸಾವಿರ ಪುಸ್ತಕಗಳ ಲೈಬ್ರೆರಿ ಮಾಡಿರುವ ಅಪರೂಪದ ಪುಸ್ತಕ ಪ್ರೇಮಿ ಉದ್ಯಾವರ ಮಾಡದ ಸುರೇಂದ್ರ ಕೋಟ್ಯಾನ್‌ರನ್ನು ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ಉದ್ಯಮಿ ರಾಘವೇಂದ್ರ ರಾವ್, ಚಿತ್ರ ಕಲಾವಿದ ಜಾನ್ಚಂದ್ರನ್ ಮುಖ್ಯ ಅತಿಥಿಗಳಾಗಿದ್ದರು.
ಶಶಿರಾಜ್ ರಾವ್ ಕಾವೂರು ಸ್ವಾಗತಿಸಿದರು. ಗೋಪಾಲಕೃಷ್ಣ ಶೆಟ್ಟಿ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕೃತಿಗಳ ಬಿಡುಗಡೆ..
ಡಾ.ವಿಶ್ವನಾಥ ಬದಿಕಾನ ಅವರ ‘ಕರ್ನಾಟಕ ಜಾನಪದ ಅಧ್ಯಯನದ ಮೊದಲ ಹೆಜ್ಜೆ’ ಜನಪದ ಅಧ್ಯಯನ ಗ್ರಂಥ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಸೃಷ್ಟಿ ಸಿರಿಯಲಿ ಪುಷ್ಪವೃಷ್ಟಿ’- ಕನ್ನಡ ಕವನ ಸಂಕಲನ, ಅಕ್ಷತರಾಜ್ ಪೆರ್ಲ ಅವರ ‘ನೆಲ ಉರುಳು’ ಕನ್ನಡ ನಾಟಕ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ‘ನೆಪವು ಸಿಕ್ಕಿದೆ ಬದುಕಿಗೆ’ ಕನ್ನಡ ಕವನ ಸಂಕಲನ, ಕರುಣಾಕರ ಬಳ್ಕೂರು ಅವರ ‘ಬೆಳಕು’ ಕನ್ನಡ ಕವನ ಸಂಕಲನ, ಡಾ.ಎಸ್.ಎಂ. ಶಿವಪ್ರಕಾಶ್ ಅವರ ‘ಟೆಕ್ನಾಲಜಿ ವರ್ಸಸ್ ಇಕಾಲಜಿ’ ಕನ್ನಡ ಇಂಗ್ಲಿಷ್ ಕವನ, ರಘು ಇಡ್ಕಿದು ಅವರ ‘ಪೊನ್ನಂದಣ’ ಕನ್ನಡ ಕೃತಿ ವಿಮರ್ಶೆ, ಡಾ.ಕಾತ್ಯಾಯನಿ ಕುಂಜಿಬೆಟ್ಟು ಅವರ ‘ಕಾತೀಶ್ವರ ವಚನಗಳು’ ಕನ್ನಡ ವಚನ, ಪ್ರೊ.ಅಕ್ಷಯ ಶೆಟ್ಟಿ ಅವರ ‘ಅವಳೆಂದರೆ ಬರೀ ಹೆಣ್ಣೆ’ ಕನ್ನಡ ಕಥಾ ಸಂಕಲನ ಹಾಗೂ ಪ್ರಕಾಶ್ ವಿ.ಎನ್ ಅವರ ‘ನಮ್ಮವನು ಶ್ರೀ ರಾಮಚಂದ್ರ’ ಕನ್ನಡ ನಾಟಕ ಸೇರಿ 10 ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.