
ಫೆ.20 ರಂದು ಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನೆ
ಮಂಗಳೂರು: ಉಡುಪಿಯಿಂದ ಕಾಸರಗೋಡಿಗೆ ವಿದ್ಯುತ್ ಪ್ರಸರಣ ಮಾರ್ಗ ಮಾಡುತ್ತಿದ್ದು ಇದನ್ನು ವಿರೋಧಿಸಿ ಫೆ.20 ರಂದು ಮಂಗಳೂರಿನಲ್ಲಿ ಬೃಹತ್ ಹಕ್ಕೋತ್ತಾಯ ಜಾಥಾ ಮತ್ತು ಪ್ರತಿಭಟನೆ ನಡೆಯಲಿದೆ ಎಂದು ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿ’ಕೋಸ್ತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಥೋಲಿಕ್ ಸಭಾ ಮಂಗಳೂರು ಪ್ರದೇಶ ರಿ. ಇದರ ಮುಂದಾಳತ್ವದಲ್ಲಿ ಕಥೋಲಿಕ್ ಸಭಾ ಉಡುಪಿ ಪ್ರದೇಶ ರಿ. ಉಡುಪಿ, ಕಾಸರಗೋಡು 400 ಕೆವಿ ಮತ್ತು ಪಾಲಡ್ಕ-ಕಡಂದಲೆ 400/220ಕೆವಿ ವಿದ್ಯತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ, ಉಡುಪಿ, ದ.ಕ., ರೈತ ಸಂಘ-ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ ರಿ. ಕರ್ನಾಟಕ ಪ್ರದೇಶ, ಪರಿಸರ ಸಂಗಮ-ಜೀವ ಸಂಕುಲ ಪರ ವೇದಿಕೆ, ಉಡುಪಿ ಜಿಲ್ಲಾ ಕೃಷಿಕರ ಸಂಘ ಹಾಗೂ ಸಮಾನ ಮನಸ್ಕ ರೈತ ಪರ ಸಂಘ-ಸಂಸ್ಥೆಗಳು, ದ.ಕ. ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವತಿಯಿಂದ ಬೆಳಗ್ಗೆ 10 ಗಂಟೆಗೆ ಜ್ಯೋತಿ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಜಾಥಾ ಸಾಗಲಿದ್ದು, ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಕಳೆದ ನಾಲ್ಕುವರೆ ವರ್ಷದಿಂದ ಈ ಕೆಲಸ ನಡೆಯುತ್ತಿದ್ದು, ಇದರಿಂದ ಆಗುವ ತೊಂದರೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು, ಈಗಾಗಲೇ ಇದು ಕೋರ್ಟ್‌ನಲ್ಲಿ ಕೇಸ್ ಇದ್ದು, ಆದರೂ ಜನರನ್ನು ಬೆದರಿಸಿ ಕೆಲಸ ನಡೆಯುತ್ತಿದ್ದು, ಇದನ್ನು ನಿಲ್ಲಿಸುವಂತೆ ಆಗ್ರಹಿಸಲಾಗುವುದು. ಸಾಕಷ್ಟು ಪ್ರಾಣಿ, ಪಕ್ಷಿ, ಮನುಷ್ಯರಿಗೂ ಇದರಿಂದ ತೊಂರೆಯಾಗಲಿದೆ ಎಂದು ತಿಳಿಸಿದರು.
ಈ ಯೋಜನೆಯಿಂದ 3450 ಎಕ್ಕರೆ ಪ್ರದೇಶ ನಾಶವಾಗಲಿದ್ದು, 2,56,000 ಅಡಿಕೆ, 1 ಲಕ್ಷ ತೆಂಗು, 4.5 ಲಕ್ಷ ಕಾಳು ಮೆಣಸು, 25 ಸಾವಿರ ಹಲಸು, 28 ಸಾವಿರ ಮಾವು, 2.5 ಲಕ್ಷ ಕಾಡು ಮರ, ಲಕ್ಷಾಂತರ ಸಂಖ್ಯೆಯ ತೋಟಗಾರಿಕೆ ಬೆಳೆಗಳು ನಾಶವಾಗಲಿದ್ದು, 38 ದೈವಸ್ಥಾನ, 12 ದೇವಸ್ಥಾನ, 8 ಮಸೀದಿ, 14 ಶಾಂತಿದಾಮ, 14 ಪ್ರಾರ್ಥನಾ ಮಂದಿರಗಳು ನಾಶವಾಗಲಿವೆ ಎಂದು ತಿಳಿಸಿದರು.
ನಮಗೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಕರಾರು ಇಲ್ಲ. ನಮ್ಮ ಹೋರಾಟ ಯೋಜನೆಯ ವಿರುದ್ಧವಲ್ಲ. ಯೋಜನೆಯ ಮಾರ್ಗದ ವಿರುದ್ಧ. ಕೃಷಿ ಭೂಮಿಯನ್ನು ಬಿಟ್ಟು ಪರ್ಯಾಯ ಮಾರ್ಗವನ್ನು ಆರಿಸಲಿ, ರಾಷ್ಟ್ರೀಯ ಹೆದ್ದಾರಿಯಾಗಿ, ರೈಲ್ವೆ ಮಾರ್ಗವಾಗಿ ಇಲ್ಲ ಭೂಗತವಾಗಿ ವಿದ್ಯುತ್ ಲೈನ್ ಅಳವಡಿಸಲಿ ಅದನ್ನು ಬಿಟ್ಟು ಫಲವತ್ತಾದ ಕೃಷಿ ಭೂಮಿಯನ್ನು ನಾಶ ಮಾಡಿ ಬೇರೆಡೆ ಕೃಷಿ ಮಾಡಿ ಎಂದರೆ ಹೇಗೆ ಮಾಡುವುದು ಎಂದು ಪ್ರಶ್ನಿಸಿದರು.
ಈ ಯೋಜನೆಯನ್ನು ಪ್ರಾರಂಭಿಸುವ ಮೊದಲು ಸಾರ್ವಜನಿಕರ ಸಭೆ ಕರೆದು ಕೆಪಿಟಿಸಿಎಲ್ ಹಗೂ ಜಿಲ್ಲಾಡಳಿತದ ಸಮ್ಮುಖದಲ್ಲಿ ಸಭೆ ನಡೆಯಬೇಕು, ಭೂಗತ ಲೈನ್ ಮಾಡಬೇಕು, ಪೊಲೀಸರನ್ನು ಬಳಸಿ ರೈತರನ್ನು ಧಮನಿಸುವುದನ್ನು ಬಿಡಿ, ಅಭಿವೃದ್ಧಿಗೆ ನಮ್ಮ ಅಡ್ಡಿ ಇಲ್ಲ, ಅನ್ನದಾತರನ್ನು ಬದುಕಲು ಬಿಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಆಲ್ವಿನ್ ಡಿ’ಸೋಜಾ ಪಾನೀರ್, ಪ್ರ.ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೇರೋ, ಸದಸ್ಯ ವಿಕ್ಟರ್ ಕಡಂದಲೆ, ಸಂದ್ರಹಾಸ್ ಶೆಟ್ಟಿ, ಕೃಷ್ಣ ಪ್ರಸಾದ್ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.