
ತುಂಬೆ ಡ್ಯಾಂ: 70 ದಿನಕ್ಕೆ ನೀರು ಸಾಕು: ಆಯುಕ್ತ ರವಿಚಂದ್ರ ನಾಯಕ್
ಮಂಗಳೂರು: ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಪ್ರಸಕ್ತ 70 ದಿನಕ್ಕೆ ಸಾಕಾಗುವಷ್ಟು ನೀರಿನ ಸಂಗ್ರಹ ಇದೆ. ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತ ರವಿಚಂದ್ರ ನಾಯಕ್ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಂಬೆ ಡ್ಯಾಂನಿಂದ ಪ್ರತಿದಿನ ಮಂಗಳೂರಿಗೆ 160 ಎಂಎಲ್‌ಡಿ ನೀರು ಪಂಪಿಂಗ್ ಮಾಡಲಾಗುತ್ತಿದೆ. 96 ಸಾವಿರ ನೀರಿನ ಸಂಪರ್ಕ ಇದ್ದು, 86 ಸಾವಿರ ಲೈವ್ ಸಂಪರ್ಕ ಇದೆ. ಇದಲ್ಲದೆ ಎಂಸಿಎಫ್, ಎಸ್‌ಇಝಡ್ ಹಾಗೂ ಉಳ್ಳಾಲ, ಮೂಲ್ಕಿ ಪಂಚಾಯ್ತಿಗಳಿಗೆ ನೀರು ಪೂರೈಸಲಾಗುತ್ತಿದೆ ಎಂದರು.
ತುಂಬೆ ಡ್ಯಾಂನಲ್ಲಿ ನೀರು ಕಡಿಮೆಯಾದರೆ, ಅದರ ಕೆಳಭಾಗದಲ್ಲಿ ಇರುವ ಅಡ್ಯಾರು ಡ್ಯಾಂನಿಂದ ಪ್ರತಿದಿನ 70 ಎಂಎಲ್‌ಡಿಯಷ್ಟು ನೀರನ್ನು ತುಂಬೆ ಡ್ಯಾಂಗೆ ಪಂಪಿಂಗ್ ಮಾಡಲಾಗುತ್ತದೆ. ಈ ಬಾರಿ ಜಕ್ರಿಬೆಟ್ಟು, ಎಎಂಆರ್ ಡ್ಯಾಂಗಳ ಗೇಟ್‌ಗಳನ್ನು ಈಗಲೇ ಬಂದ್ ಮಾಡಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಲಾಗುತ್ತಿದೆ. ಈ ಮೂಲಕ 90 ದಿನಗಳಿಗೆ ನೀರು ಸಂಗ್ರಹಿಸಿ ಅನಿವಾರ್ಯವಾದರೆ ಮುಂಗಾರು ಪೂರ್ವ ಮಳೆಯನ್ನು ಆಧರಿಸಿ ಮೇ ತಿಂಗಳಲ್ಲಿ ಅನಿವಾರ್ಯವಾದರೆ ನೀರಿನ ರೇಷನಿಂಗ್ ಮಾಡಲಾಗುವುದು ಎಂದರು.
ಉಳ್ಳಾಲಕ್ಕೆ ತುಂಬೆಯಲ್ಲಿ ಪ್ರತ್ಯೇಕ ಜಾಕ್‌ವೆಲ್ ನಿರ್ಮಿಸಿ ಪ್ರಾಯೋಗಿಕವಾಗಿ ನೀರು ಪೂರೈಕೆಯಾಗುತ್ತಿದೆ. ಪರಿಪೂರ್ಣವಾಗಿ ನೀರು ಪೂರೈಕೆ ಆರಂಭವಾದಾಗ ಪಾಲಿಕೆ ವತಿಯಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು. ಉಳ್ಳಾಲ ನಗರ ಸಭೆಯಿಂದ 2.7 ಕೋಟಿ ರೂ. ಹಾಗೂ ಮೂಲ್ಕಿ ಪಟ್ಟಣ ಪಂಚಾಯ್ತಿಯಿಂದ 1.2 ಕೋಟಿ ರೂ. ಪಾಲಿಕೆಗೆ ನೀರಿನ ಬಿಲ್ಲು ಪಾವತಿಗೆ ಬಾಕಿ ಇದೆ ಎಂದರು.