
ವಿದ್ಯುತ್ ಪ್ರಸರಣ ಮಾರ್ಗ ವಿರೋಧಿಸಿ ಪ್ರತಿಭಟನಾ ರ‍್ಯಾಲಿ
ಮಂಗಳೂರು: ಉಡುಪಿ-ಕಾಸರಗೋಡು 400 ಕೆವಿ ಮತ್ತು ಪಾಲಡ್ಕ-ಕಡಂದಲೆ 400/220 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿಯನ್ನು ವಿರೋಧಿಸಿ ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ , ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶ, ವಿದ್ಯುತ್ ಮಾರ್ಗ ವಿರೋಧಿ ಹೋರಾಟ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಗುರುವಾರ ಬೆಳಗ್ಗೆ ನಗರದ ಬಲ್ಮಠದಿಂದ ಮಿನಿ ವಿಧಾನಸೌಧದವರೆಗೆ ನಡೆಯಿತು.
ನಗರದ ಬಲ್ಮಠದ ಸಿಎಸ್ ಐ ಮೈದಾನದಿಂದ ಆರಂಭಗೊಂಡ ಪ್ರತಿಭಟನಾ ರ‍್ಯಾಲಿಗೆ ಮಂಗಳೂರು ಕ್ಯಾಥೊಲಿಕ್ ಧರ್ಮ ಪ್ರಾಂತ್ಯದ ಆಧ್ಮಾತಿಕ ನಿರ್ದೇಶಕ ಫಾ. ಜೆ.ಬಿ.ಸಲ್ದಾನ ಅವರು ಹಸಿರು ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ರ‍್ಯಾಲಿಯಲ್ಲಿ ರೈತರು, ಕ್ಯಾಥೋಲಿಕ್ ಸಭಾದ ಧುರೀಣರು, ಹಲವು ಮಂದಿ ಧರ್ಮಗುರುಗಳು, ಭಾಗವಹಿಸಿದ್ದರು. ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ಪಾವ್ಲ್ ರೋಲ್ಫಿ ಡಿಕೋಸ್ತ, ಚಂದ್ರಹಾಸ ಶೆಟ್ಟಿ ಇನ್ನಾ, , ಹೋರಾಟ ಸಮಿತಿಯ ವಿಕ್ಟರ್ ಕಡಂದಲೆ, ಕೃಷ್ಣ ಪ್ರಸಾದ್ ತಂತ್ರಿ, ಆಲ್ಫೋನ್ಸ್ ಡಿ ಸೋಜ, ಸತ್ಯನಾರಾಯಣ ಭಟ್ , ದ.ಕ.ಜಿಲ್ಲಾ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಉಡುಪಿ ಜಿಲ್ಲಾ ಕೃಷಿಕ ಸಂಘದ ರಾಮಕೃಷ್ಣ ಶರ್ಮ, ಪರಿಸರ ಸಂಗಮ ಸಂಘದ ಶ್ರೀ ಕುಮಾರ್, ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಆಲ್ವಿನ್ ಡಿಸೋಜ, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೇರೊ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ಟಲಿನೊ, ಲಾರೆನ್ಸ್ ಡಿ ಸೋಜ ಸುರತ್ಕಲ್, ಸ್ಟ್ಯಾನಿ ಲೋಬೊ ಮಾತನಾಡಿದರು.
ರೈತ ಸಂಘ - ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರದೇಶ, ಪರಿಸರ ಸಂಗಮ-ಜೀವ ಸಂಕುಲ ಪರ ವೇದಿಕೆ, ಉಡುಪಿ ಜಿಲ್ಲಾ ಕೃಷಿಕರ ಸಂಘ ಹಾಗೂ ಸಮಾನ ಮನಸ್ಕ ರೈತ ಪರ ಸಂಘ -ಸಂಸ್ಥೆಗಳು ದ.ಕ., ಉಡುಪಿ, ಐಸಿವೈಎಂ ಮಂಗಳೂರು ಧರ್ಮ ಪ್ರಾಂತ ಮತ್ತು ಕಾಸರಗೋಡು ಜಿಲ್ಲೆ ಇವುಗಳ ಸಹಭಾಗಿತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು 10 ಸಾವಿರ ಮಂದಿ ಭಾಗವಹಿಸಿದ್ದರು.
400 ಕೆವಿ ವಿದ್ಯುತ್ ಲೈನ್ ಯೋಜನೆ ಹೆಸರಿನಲ್ಲಿ 5 ವರ್ಷಗಳಿಂದ ಈ ಯೋಜನೆ ಗುತ್ತಿಗೆದಾರ ಕಂಪನಿ ಎಂದೇಳಿ ಕೊಳ್ಳುತ್ತಿರುವ ಸ್ಟೆರ್ಲೈಟ್ ಪವರ್ ಕಂಪನಿಯವರು ಉಡುಪಿ, ದ.ಕ. ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಿದ್ಯುತ್ ಮಾರ್ಗ ಕಾಮಗಾರಿ ನೆಪದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಇಂಧನ ಸಚಿವಾಲಯದ ಸ್ಪಷ್ಟ ನೀತಿ-ನಿಯಮ, ಕಾನೂನಾ ತ್ಮಕ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಕಾನೂನು ಬಾಹಿರವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಯೋಜನೆಗಳ ಬಗ್ಗೆ ಪ್ರಾಥಮಿಕ ಮಾಹಿತಿಗಾಗಿ ಯಾವುದೇ ಸಾರ್ವಜನಿಕ ಸಮಾಲೋಚನಾ ಸಭೆಗಳನ್ನು ನಡೆಸದೆ ಉದ್ದೇಶಿತ ಯೋಜನಾ ಮಾರ್ಗದ ಭೂಮಾಲಕರಿಗೆ ಯಾವುದೇ ನೋಟಿಸ್ ನೀಡದೆ, ಭೂಮಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿ ನಡೆಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯ ಬಳಿಕ ದ.ಕ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಪ್ರಧಾನ ಮಂತ್ರಿ , ರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಮತ್ತು ರಾಜ್ಯ ಸಚಿವರುಗಳಿಗೆ ಮನವಿ ಸಲ್ಲಿಸಲಾಯಿತು.
ಯೋಜನೆಯಿಂದಾಗಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರಿನಿಂದ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದವರೆಗಿನ 27 ಗ್ರಾಮಗಳ ಮತ್ತು ಕಾಸರಗೋಡು ಜಿಲ್ಲೆಯವರೆಗಿನ 115 ಕಿ ಮೀ ಉದ್ದ ಮತ್ತು 46 ಮೀಟರ್ ಅಗಲದ ಪ್ರಸ್ತಾವಿತ ಯೋಜನಾ ಮಾರ್ಗಕ್ಕಾಗಿ ನೇರವಾಗಿ 1150 ಎಕರೆ ಸಮೃದ್ಧ ಕೃಷಿ ಭೂಮಿ ಜೊತೆಗೆ ಈ ಲೈನ್ನ ಇಕ್ಕೆಲಗಳಲ್ಲಿ ಯಾವುದೇ ಮನೆ, ಕೊಟ್ಟಿಗೆ, ಗೋಡೌನ್ ಇನ್ನಿತರ ಯಾವುದೇ ಕಟ್ಟಡಗಳನ್ನು ಕಟ್ಟಿಕೊಳ್ಳಲು ಅವಕಾಶವಿಲ್ಲ. ಸುಮಾರು 3450ಕ್ಕೂ ಅಧಿಕ ಜಮೀನು ಈ ಯೋಜನೆಗೆ ಸರ್ವನಾಶವಾಗಲಿದೆ.
ಯೋಜನಾ ವ್ಯಾಪ್ತಿಯ ಸುಮಾರು 2.65 ಲಕ್ಷದಷ್ಟು ಅಡಿಕೆ ಮರಗಳನ್ನು ಬುಡ ಸಮೇತ ಕಡಿದು ಹಾಕಲಾಗುತ್ತದೆ. ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ತೆಂಗಿನ ಮರಗಳು, ಸುಮಾರು 4.5 ಲಕ್ಷದಷ್ಟು ಕಾಳು ಮೆಣಸಿನ ಬಳ್ಳಿಗಳು ನಾಶವಾ ಗಲಿದೆ. ಸುಮಾರು 1.5 ಲಕ್ಷ ರಬ್ಬರ್ ಮರಗಳು ನೆಲಸಮವಾಗಲಿವೆ. ಸುಮಾರು 25 ಸಾವಿರ ಹಲಸಿನ ಮರ, 28 ಸಾವಿರ ಮಾವಿನ ಮರ 2.5 ಲಕ್ಷಕ್ಕಿಂತ ಹೆಚ್ಚು ಬೃಹತ್ ಗಾತ್ರದ ವಿವಿಧ ಜಾತಿಯ ಕಾಡು ಮರಗಳು ಮತ್ತು ಔಷಧೀಯ ಗುಣವುಳ್ಳ ಸಹಸ್ರಾರು ವೈವಿಧ್ಯಮಯ ಅರಣ್ಯ ಸಂಪತ್ತು ನಿರ್ನಾಮವಾಗಲಿದೆ. ಲಕ್ಷಾಂತರ ಸಂಖ್ಯೆಯ ತೋಟಗಾರಿಕಾ ಬೆಳೆ ತೋಟಗಳು ಸರ್ವ ನಾಶವಾಗಲಿದೆ.