
ತಿಂಗಳ ಮೊದಲ ಶನಿವಾರ, ಭಾನುವಾರ ಸಾವಯವ ಸಂತೆ: ಕೆ. ರತ್ನಾಕರ ಕುಳಾಯಿ
ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ವತಿಯಿಂದ ವಿಷಮುಕ್ತ ಅನ್ನದ ಬಟ್ಟಲು ಆಗಬೇಕೆಂಬ ಒತ್ತಾಸೆಯಿಂದ ಜನಶಿಕ್ಷಣದ ಜತೆಗೆ ರಾಜ್ಯದ ವಿವಿಧ ಸಾವಯವ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಸಾವಯವ ಸಂತೆಯನ್ನು 2025ರ ಪೆಬ್ರವರಿಯಿಂದ ನಿರಂತರ ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ಭಾನುವಾರ ಮಂಗಳೂರಿನ ನಂತೂರು ಶ್ರೀ ಭಾರತೀ ಸಮೂಹ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ಆರಂಭಿಸಲಾಗುವುದು ಎಂದು ಬಳಗದ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಯವ ಸಂತೆಯಲ್ಲಿ ವಿವಿಧ ಸಾವಯವ ತರಕಾರಿ, ಹಣ್ಣು, ವಿವಿಧ ದಿನಸಿ ಸಾಮಗ್ರಿ ಲಭ್ಯ. ಫೆ.2ರಂದು ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ಎಲೆ ಅರಿವು ಎಂಬ ಕಾರ್ಯಕ್ರಮ ನಡೆಯಲಿದೆ. ಹಲವಾರು ವಿಧದ ಎಲೆ, ಬಳ್ಳಿ, ಗಿಡ, ಕಳೆಗಳ ಪರಿಚಯ, ಬಳಕೆ ಹಾಗೂ ಮನೆಮದ್ದಿನ ಮಾಹಿತಿ ನೀಡಲಾಗುವುದು ಎಂದರು.
ಬೆಳಗ್ಗೆ 10ಕ್ಕೆ ಮರೆಯಾಗುತ್ತಿರುವ ಪ್ರಕೃತಿಯ ಅನನ್ಯ ಸಂಪತ್ತು ವಿಷಯದ ಬಗ್ಗೆ ಬೆಂಗಳೂರಿನ ಸುಸ್ಥಿರ ಕೃಷಿಕ ಶ್ರೀವತ್ಸ ಗೋವಿಂದರಾಜು ಮಾಹಿತಿ ನೀಡುವರು. ಮಧ್ಯಾಹ್ನ 2ಕ್ಕೆ ಹಸಿರು ಎಲೆಗಳು ಮತ್ತು ಆಯುರ್ವೇದದ ಬಗ್ಗೆ ವೈದ್ಯ ಡಾ. ಕೇಶವರಾಜ್ ಮಾತನಾಡುವರು. ಜನಮಾನಸದಿಂದ ಮರೆಯಾಗುತ್ತಿರುವ ಅಪೂರ್ವ ಗಿಡಮೂಲಿಕೆಗಳು ಎಂಬ ಬಗ್ಗೆ ಸಂಜೆ 4ಕ್ಕೆ ಪಿಲಿಕುಳ ಆಯುರ್ವೇದ ವನದ ಮುಖ್ಯಸ್ಥ ಉದಯಕುಮಾರ್ ಶೆಟ್ಟಿ ಮಾಹಿತಿ ನೀಡಲಿದ್ದಾರೆ. ಶ್ರೀವತ್ಸ ಗೋವಿಂದರಾಜು ಅವರು ಹಸಿರು ಉದ್ಯಮಿ ಮತ್ತು ಸುಸ್ಥಿರ ಜೀವನ ತರಬೇತುದಾರ. ೪೦ಕ್ಕೂ ಹೆಚ್ಚು ದೇಶಗಳಲ್ಲಿ ಉನ್ನತ ಕಾರ್ಪೋರೇಟ್ ಕಂಪೆನಿಗಳಲ್ಲಿ ಕೆಲಸ ಮಾಡಿದ ಐಟಿ ವೃತ್ತಿಪರರು. ಶಾಲಾ ಮಕ್ಕಳಿಗೆ ನೂರಾರು ಕಾರ್ಯಕ್ರಮ ನೀಡಿ, ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ಮುನ್ನಡೆಯುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಉಚಿತವಾಗಿರುತ್ತದೆ ಎಂದರು.
ಆಸಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಿ ಎಲೆ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಮಾಹಿತಿಗೆ ದೂ. 9480682923 ಸಂಪರ್ಕಿಸಬಹುದು. ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ನಗರದ ಸಂಘನಿಕೇತನದಲ್ಲಿ ಇತ್ತೀಚೆಗೆ ನಡೆದ ಗೆಡ್ಡೆಗೆಣಸು? ಸೊಪ್ಪು ಮೇಳ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಬಳಗದ ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್, ಅಧ್ಯಕ್ಷ ಜಿ.ಆರ್. ಪ್ರಸಾದ್, ಶರತ್ ಉಪಸ್ಥಿತರಿದ್ದರು.