
ಲಂಚ ಸ್ವೀಕಾರ ಇನ್ಸ್‌ಪೆಕ್ವರ್‌ಗೆ ಜಾಮೀನು
ಮಂಗಳೂರು: ಲಂಚ ಬೇಡಿಕೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಜ.27ರಂದು ಕೇಸೊಂದರಲ್ಲಿ ಠಾಣೆಯಲ್ಲಿದ್ದ ವಾಹನ ಬಿಡಿಸಿಕೊಳ್ಳಲು ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಲಂಚದ ಬೇಡಿಕೆ ಇರಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಈ ಸಂಬಂಧ ಲಂಚದ ಆರೋಪದಲ್ಲಿ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಶರೀಫ್ ಹಾಗೂ ಸಿಬ್ಬಂದಿ ಪ್ರವೀಣ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದರು.
ಬಂಧಿತ ಆರೋಪಿಗಳ ಪರ ವಕೀಲರು ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಶೆ ಸಂಧ್ಯಾ ಅವರು ಇನ್ಸ್ಪೆಕ್ಟರ್ ಮೊಹಮ್ಮದ್ ಶರೀಫ್ರವರು ಲಂಚದ ಬೇಡಿಕೆ ಇರಿಸಿದ ಬಗ್ಗೆ ಹಾಗೂ ಲಂಚದ ಹಣ ಸ್ವೀಕರಿಸಿದ ಬಗ್ಗೆ ಯಾವುದೇ ಪೂರಕವಾದ ಅಂಶಗಳು ಇಲ್ಲದ ಕಾರಣ ಅವರ ಜಾಮೀನು ಅರ್ಜಿ ಮಂಜೂರು ಮಾಡಿದ್ದಾರೆ. ಆರೋಪಿಯಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡುವಂತೆ ಗುರುವಾರ ಆದೇಶ ಹೊರಡಿಸಿದ್ದಾರೆ.
ಆರೋಪಿಗಳ ಪರವಾಗಿ ವಕೀಲರಾದ ಅರುಣ್ ಬಂಗೇರ ಮತ್ತು ರಿಹಾನಾ ಪರ್ವಿನ್ ವಾದಿಸಿದ್ದಾರೆ.