ನಾಲ್ಕು ವರ್ಷಗಳ‌ ಹಿಂದೆ ಕಸಾಯಿ ಖಾನೆ ಸ್ಥಗಿತಗೊಂಡಿದ್ದರೂ ಅನಧಿಕೃತ ಕಸಾಯಿ ಖಾನೆ ಕಾರ್ಯಾಚರಣೆ: ಸಾವಿರಾರು ಪ್ರಾಣಿಗಳ ವಧೆ

ನಾಲ್ಕು ವರ್ಷಗಳ‌ ಹಿಂದೆ ಕಸಾಯಿ ಖಾನೆ ಸ್ಥಗಿತಗೊಂಡಿದ್ದರೂ ಅನಧಿಕೃತ ಕಸಾಯಿ ಖಾನೆ ಕಾರ್ಯಾಚರಣೆ: ಸಾವಿರಾರು ಪ್ರಾಣಿಗಳ ವಧೆ

ಮಂಗಳೂರು: ನಗರದ ಕುದ್ರೋಳಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಕಸಾಯಿ ಖಾನೆಯನ್ನು ಸ್ಥಗಿತಗೊಳಿಸಲಾಗಿದ್ದರೂ ಪಕ್ಕದ ಖಾಸಗಿ ಜಾಗದಲ್ಲಿ ಅನಧಿಕೃತವಾಗಿ ಕಸಾಯಿಖಾನೆ ಕಾರ್ಯಾಚರಿಸುತ್ತಿದ್ದುದು ಶುಕ್ರವಾರ ಪತ್ತೆಯಾಗಿದೆ. 

ವಿಷಯ ತಿಳಿದ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ವಧೆಗಾಗಿ ಕಟ್ಟಿಹಾಕಿದ್ದ ನೂರಾರು ಆಡು, ಕುರಿಗಳು ಪತ್ತೆಯಾಗಿದೆ. ಅಲ್ಲದೆ ಅಲ್ಲಲ್ಲಿ ದನ, ಆಡು, ಕುರಿಗಳ ತಲೆಗಳ ರಾಶಿ, ತ್ಯಾಜ್ಯ ರಾಶಿ ಇದ್ದುದು ಕಂಡುಬಂದಿದೆ. ಇದನ್ನು ಕಂಡ ಮೇಯರ್ ನೇತೃತ್ವದ ತಂಡ ಬೆಸ್ತು ಬಿದ್ದಿದೆ!

ನಾಲ್ಕು ವರ್ಷದ ಹಿಂದೆ ಸ್ಥಗಿತ:

ಕುದ್ರೋಳಿಯಲ್ಲಿರುವ ಕಸಾಯಿ ಖಾನೆ ಕಳೆದ ನಾಲ್ಕು ವರ್ಷಗಳ ಹಿಂದೆ ಸ್ಥಗಿತಗೊಂಡಿತ್ತು. ಹಸಿರು ಪೀಠ ಆದೇಶ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಈ ಕಸಾಯಿಖಾನೆಯ ಪಕ್ಕದ ಖಾಸಗಿ ಜಾಗದಲ್ಲಿ ಮಾತ್ರ ಅಕ್ರಮವಾಗಿ ಕಸಾಯಿಖಾನೆ ವ್ಯವಹಾರ ನಡೆಯುತ್ತಲೇ ಇತ್ತು. ಅಧಿಕಾರಿ ವರ್ಗಕ್ಕೆ ಈ ಮಾಹಿತಿ ಇದ್ದರೂ ನಿಲ್ಲಿಸುವ ಗೋಜಿಗೆ ಹೋಗಿರಲಿಲ್ಲ. ನಿರಂತರವಾಗಿ ಗೋ ವಧೆಯಾಗುತ್ತಿದೆ ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರ ದೂರಿನ ಮೇರೆಗೆ ಅಂತೂ ಶುಕ್ರವಾರ ಮೇಯರ್  ದಾಳಿ ನಡೆಸಿದ್ದಾರೆ.

ಈ ವೇಳೆ ಉಪಮೇಯರ್ ಭಾನುಮತಿ, ಪಟ್ಟಣ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷೆ  ವೀಣಾ ಮಂಗಳ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮಿತ್ರಾ ಕರಿಯ ಕಾರ್ಪೊರೇಟರ್‌ಗಳಾದ ಮನೋಹರ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.

ಸೂಕ್ತ ಕ್ರಮಕ್ಕೆ ಮೇಯರ್ ಸೂಚನೆ:

ಪ್ರಾಣಿ ವಧೆ ನಡೆಯುತ್ತಿದ್ದ ಕಟ್ಟಡವನ್ನು ಪರಿಶೀಲಿಸಿದ ಮೇಯರ್ ತಂಕ್ಕೆ ಶಾಕ್ ಕಾದಿತ್ತು. ಅಲ್ಲಲ್ಲಿ ದನ, ಆಡು, ಕುರಿಗಳ ರುಂಡಗಳು, ದೇಹದ ಭಾಗಗಳು ಒಂದು ಕೊಣೆಯಿಡೀ ರಾಶಿ ಬಿದ್ದಿರುವುದು ಲೀಲಾ ಜಾಲವಾಗಿ ಗೋ ವಧೆ ನಡೆಯುತ್ತಿದ್ದುದ್ದಕ್ಕೆ ಸಾಕ್ಷಿ ಒದಗಿಸಿತ್ತು. ಇದನ್ನು ಕಂಡು ಸಿಟ್ಟಾದ ಮೇಯರ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೂಡಲೇ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.

ಎಲ್ಲೆಡೆ ದುರ್ನಾತ:

ಖಾಸಗಿ ಜಾಗದಲ್ಲಿರುವ ಕಟ್ಟಡದೊಳಗೆ ಸುಮಾರು ಸಾವಿರಕ್ಕೂ ಅಧಿಕ ಆಡು, ಕುರಿ, ಜಾನುವಾರುಗಳ ರುಂಡ, ದೇಹದ ಭಾಗಗಳು ಪತ್ತೆಯಾಗಿದೆ. ಅಲ್ಲಲ್ಲಿ ಪ್ರಾಣಿಗಳ ಅಸ್ಥಿಪಂಜರಗಳು ಬಿದ್ದಿದ್ದು, ನೋಣಗಳು ಮುತ್ತಿಕೊಂಡಿದ್ದವು.

ಬೀಗ ಒಡೆದು ಒಳಪ್ರವೇಶಿಸಿದ ಮೇಯರ್!

ಅಕ್ರಮವಾಗಿ ಪ್ರಾಣಿ ವಧೆ ನಡೆಯುತ್ತಿದ್ದ ಕಟ್ಟಡ ಮುಂಭಾಗ ತೆರೆದೇ ಇದ್ದರೂ . ಒಳಗಿನ ಕೋಣೆಗಳಿಗೆ ಬೀಗಜಡಿಯಲಾಗಿತ್ತು. ಸಂಶಯಗೊಂಡ ಮೇಯರ್ ಕೊಠಡಿಯ ಕೀ ಕೇಳಿದಾಗ ಯಾರಲ್ಲೂ ಉತ್ತರವಿರಲಿಲ್ಲ. ಬಳಿಕ ಬೀಗ ಒಡೆದು ಒಳ ಪ್ರವೇಶಿಸಿದ ಮೇಯರ್‌ಗೆ ಒಳಗಿನ ಕರಾಳ ದೃಶ್ಯಗಳು ಕಣ್ಣಿಗೆ ರಾಚಿದವು. ಅಲ್ಲಿ ಅದು ಜಾನುವಾರು ವಧೆ ಮಾಡುವ ಸ್ಥಳವಾಗಿತ್ತು. ಅಲ್ಲಿ, ತೂಕಮಾಪನ ಮಾಂಸ ಎಲ್ಲವೂ ರಾಶಿಬಿದ್ದಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article