
ಅಭಿವೃದ್ಧಿಯು ದೈವಾರಾಧನೆಗೆ, ಸಂಸ್ಕೃತಿಗೆ ಪೂರಕವಾಗಿರಬೇಕು: ಶಾಸಕ ಕಾಮತ್
Friday, February 28, 2025
ಮಂಗಳೂರು: ಮಂಗಳೂರಿನ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತಿನ ದೈವ ಕಾಂತೇರಿ ಜುಮಾದಿ ದೈವಸ್ಥಾನದ ಆರಾಧನೆಗೆ ಅವಕಾಶವನ್ನು ನಿರಾಕರಿಸಿದ ಎಂಎಸ್‌ಇಝಡ್ ಅಧಿಕಾರಿಗಳ ನಡೆಗೆ ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಮಗೆ ಅಭಿವೃದ್ಧಿ ಬೇಕು ನಿಜ, ಹಾಗಂತ ಈ ನೆಲದ ಆಚರಣೆಗಳಿಗೆ ಕೊಡಲಿ ಏಟು ಹಾಕುವುದು ಎಷ್ಟು ಸರಿ? ಅಧಿಕಾರಿಗಳ ಈ ವರ್ತನೆ ತುಳುನಾಡಿನ ದೈವ ಪರಂಪರೆಯ ನಂಬಿಕೆ ಮೇಲೆ ಸವಾರಿ ಮಾಡಲು ಹೊರಟಂತಿದ್ದು ಅದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ನಾಡಿನಲ್ಲಿ ದೈವಾರಾಧನೆಗೆ ವಿಶೇಷ ಮಹತ್ವವಿದ್ದು ಅದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳು ನಡೆದಾಗ ಮಾತ್ರ ಆ ಶಕ್ತಿಗಳ ಶ್ರೀ ರಕ್ಷೆ ಸಿಗಲು ಸಾಧ್ಯ ಎಂದರು.
ಇಲ್ಲಿನ ಸೂಕ್ಷ್ಮತೆ ಅರಿಯದೇ ಆಕ್ಷೇಪಾರ್ಹವಾಗಿ ನಡೆದುಕೊಂಡಿರುವ ಅಧಿಕಾರಿಗಳು, ಜನರ ಆಕ್ರೋಶ ಇನ್ನೊಂದು ಹಂತಕ್ಕೆ ಹೋಗುವ ಮೊದಲು ತಮ್ಮ ತಪ್ಪನ್ನು ತಿದ್ದಿಕೊಂಡು ದೈವದ ಕೈಂಕರ್ಯಗಳು ಸುಸೂತ್ರವಾಗಿ ನಡೆಸುವಂತಾಗಲು ಅವಕಾಶ ಕಲ್ಪಿಸಬೇಕು ಮತ್ತು ದೈವಸ್ಥಾನಕ್ಕೆ ಸುಸಜ್ಜಿತ ರಸ್ತೆಯನ್ನೂ ನಿರ್ಮಿಸಬೇಕೆಂದು ಶಾಸಕರು ಪ್ರಕಟಣೆಯಲ್ಲಿ ಆಗ್ರಹಿಸಿದರು.