
ಯೋಗಾಸನಗಳು ದೈಹಿಕ ಆರೋಗ್ಯ, ಚಿತ್ತ ಶಾಂತಿಗೆ ಸಹಕಾರಿ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ.
Tuesday, February 18, 2025
ಮಂಗಳೂರು: ಯೋಗಾಸನಗಳು ದೈಹಿಕ ಆರೋಗ್ಯ, ಚಿತ್ತ ಶಾಂತಿಗೆ ಸಹಕಾರಿ. ನಿತ್ಯ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ದೇಹದ ಎಲ್ಲಾ ಅಂಗಾಂಗಳಿಗೆ ಉತ್ತಮ ವ್ಯಾಯಾಮ ದೊರಕಿ ನವಚೈತನ್ಯ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ. ತಿಳಿಸಿದರು.
ಅವರು ಇಂದು ಡಿ.ಸಿ. ಬಂಗ್ಲೆಯಲ್ಲಿ ದೇಲಂಪಾಡಿ ಯೋಗ ಪ್ರತಿಷ್ಠಾನದ ಮುಖ್ಯಸ್ಥರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ರಚಿಸಿದ ‘ಆರೋಗ್ಯ ರಕ್ಷಣೆ’ಗಾಗಿ ಇರುವ ‘ಯೋಗಾಸನಗಳ ಚಿತ್ರಪಟ ಕೈಪಿಡಿ’ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಸುಮಾರು 40 ವರ್ಷ ಮೇಲ್ಪಟ್ಟು ಉಚಿತ ಯೋಗ ತರಬೇತಿಯನ್ನು ನಡೆಸುತ್ತಿದ್ದಾರೆ. ಸುಮಾರು ಮೂರುವರೆ ಲಕ್ಷಕ್ಕೂ ಅಧಿಕ ಮಂದಿ ಇವರಿಂದ ಯೋಗ ತರಬೇತಿಯನ್ನು ನೀಡಿದ್ದಾರೆ. ಈ ಯೋಗಾಸನ ಚಿತ್ರಪಟಗಳ ಕೈಪಿಡಿಯು ಯೋಗ ಅಭ್ಯಾಸಿಗರಿಗೆ ಸಹಾಯವಾಗುತ್ತದೆ ಎಂದ ಅವರು ಯೋಗವನ್ನು ಗುರುಮುಖೇನವೇ ಕಲಿತು ಅಭ್ಯಾಸ ನಡೆಸಿ ಎಂದು ತಿಳಿಸಿದರು.
ಗೋಪಾಲಕೃಷ್ಣ ದೇಲಂಪಾಡಿ ಅವರು ಮಾತನಾಡಿ, ಯೋಗಾಭ್ಯಾಸಿಗಳಿಗೆ ಅಭ್ಯಾಸ ಮಾಡಲು ಆಸನದ ಹೆಸರು ಹಾಗೂ ಚಿತ್ರಗಳು ತುಂಬಾ ಸಹಕಾರಿಯಾಗುತ್ತದೆ ಎಂದರು.
ದೇಲಂಪಾಡಿ ಪ್ರತಿಷ್ಠಾನದ ಹಿರಿಯ ಯೋಗ ಶಿಕ್ಷಕ ನೀನಾ ಪೈ, ವೀಣಾ ಮಾರ್ಲ, ಸುಶೀಲ ಕುಮಾರಿ, ಕುಮಾರ್ ಶೆಣೈ, ವೀಣಾ ಮತ್ತಿತರರು ಉಪಸ್ಥಿತರಿದ್ದರು.
ದೇಲಂಪಾಡಿ ಪ್ರತಿಷ್ಠಾನದ ಹಲವು ಯೋಗ ಪಟುಗಳು ಭಾಗವಹಿಸಿದರು. ಕಾರ್ತಿಕ್, ರೋಶನಿ ಹಾಗೂ ಶ್ರೀಲಕ್ಷ್ಮೀ ಈ ಸಂದರ್ಭದಲ್ಲಿ ಆಸನಗಳ ಪ್ರದರ್ಶನವನ್ನು ನೀಡಿದರು.