
ಅಕ್ರಮವಾಗಿ ಕಟ್ಟಿಗೆ ಸಾಗಾಟದ ವಾಹನ ವಶ
Wednesday, March 26, 2025
ಬಂಟ್ವಾಳ: ಲಾರಿಯೊಂದರಲ್ಲಿ ವಿವಿಧ ಜಾತಿಯ ಕಟ್ಟಿಗೆಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಯವರು ಮಂಗಳೂರು ತಾಲೂಕಿನ ಬಡಗ ಉಳಿಪ್ಪಾಡಿ ಗ್ರಾಮದ ಗಂಜಿಮಠ ಎಂಬಲ್ಲಿ ಪತ್ತೆಹಚ್ಚಿದ್ದಾರೆ.
ಗಂಜಿಮಠದಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವೇಳೆ ಮೂಡಬಿದ್ರೆ ಕಡೆಯಿಂದ ಕಟ್ಟಿಗೆಯನ್ನು ಹೇರಿಕೊಂಡು ಬರುತ್ತಿದ್ದ ಲಾರಿಯನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ತಡೆದ ಪರಿಶೀಲಿಸಿದಾಗ ಇದಕ್ಕೆ ಯಾವುದೇ ದಾಖಲೆಪತ್ರ ಇಲ್ಲದಿರುವುದು ಕಂಡು ಬಂದಿದೆ.
ತಕ್ಷಣ ಲಾರಿ ಸಹಿತ ಕಟ್ಟಿಗೆಯನ್ನು ವಶಪಡಿಸಿಕೊಂಡಿದ್ದು,ಇದರ ಒಟ್ಟು ಮೌಲ್ಯ 2.5ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್ ಖಣದಾಳೆ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಕುಮಾರ್ ಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ ಪೂಜಾರಿ, ಅಶ್ವಿಥ್ ಗಟ್ಟಿ, ವಿನಯ ಕುಮಾರ್, ಶಿವಾನಂದ ಮಾಧರ, ವಾಹನ ಚಾಲಕ ಜಯಪ್ರಕಾಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.
ಆರೋಪಿ ವಾಹನ ಚಾಲಕ ಹಮೀದ್ ವಾಲ್ಪಾಡಿ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈತನಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.