
ಥೀಮ್ ಪಾರ್ಕ್ ವಿಚಾರವನ್ನೇ ಮುಂದಿಟ್ಟು ಬಿಜೆಪಿ 2028ರ ಚುನಾವಣೆ ಎದುರಿಸಲಿದೆ: ಮಣಿರಾಜ್ ಶೆಟ್ಟಿ
ಡಿಕೆಶಿ ವಿರುದ್ಧ ಕಾರ್ಕಳ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
ಕಾರ್ಕಳ: ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆಯಬೇಕಿದ್ದ ಬೈಲೂರು ಪರಶುರಾಮ ಥೀಮ್ ಪಾರ್ಕ್ ವಿಚಾರವನ್ನೇ ಮುಂದಿಟ್ಟು ಬಿಜೆಪಿ 2028ರ ಚುನಾವಣೆ ಎದುರಿಸಲಿದೆ ಎಂದು ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಹೇಳಿದರು.
ಅವರು ಮಾ. 6ರಂದು ಪರಶುರಾಮ ಥೀಂ ಪಾರ್ಕ್ ವಿಚಾರದ ಕುರಿತು ಕಾಂಗ್ರೆಸ್ ಸರಕಾರದ ನಿಲುವಿನ ವಿರುದ್ಧ ಬೈಲೂರು ಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಕಾರ್ಕಳಕ್ಕೆ ಬಂದಾಗ ಮುಂದಿನ ಚುನಾವಣೆ ಬರುವ ತನಕ ಥೀಮ್ ಪಾರ್ಕ್ ಹಾಗೆಯೇ ಇರಲಿ. ಅದೇ ವಿಚಾರ ಮುಂದಿಟ್ಟು ಚುನಾವಣೆ ಗೆಲ್ಲೋಣ ಎಂದಿದ್ದರು. ನಿಮ್ಮ ಹಗ್ಗವನ್ನು ನಿಮ್ಮ ಕುತ್ತಿಗೆಗೆ ಹಾಕಿ, ಅದೇ ಥೀಮ್ ಪಾರ್ಕ್ ವಿಚಾರದಡಿ ನಾವು ಚುನಾವಣೆ ಗೆಲ್ಲುತ್ತೆವೆ ಎಂದು ಮಣಿರಾಜ್ ಶೆಟ್ಟಿ ತಿರುಗೇಟು ನೀಡಿದರು.
1972ರಿಂದ 2004ರವರೆಗೆ ಕಾರ್ಕಳದಲ್ಲಿ ಕಾಂಗ್ರೆಸ್ಸಿಗರೇ ಶಾಸಕರಾಗಿದ್ದರು. ಆ ಅವಧಿಯಲ್ಲಿ ನೀವು ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದ ಮಣಿರಾಜ್ ಶೆಟ್ಟಿ 2004ರಿಂದ ಪ್ರಗತಿಯ ಪರ್ವ ನಡೆದಿದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ. ಬಿಜೆಪಿ ಅವಧಿಯಲ್ಲಿ ನಡೆದ ಅಭಿವೃದ್ಧಿ ಸಹಿಸದೇ ಪರಶುರಾಮನ ಮೂರ್ತಿಯ ಅರ್ಧ ಭಾಗವನ್ನು ಕಾಂಗ್ರೆಸ್‌ನವರು ತೆಗೆದುಕೊಂಡು ಹೋದರು. ರಸ್ತೆಗೆ ಮಣ್ಣು ಹಾಕಿದರು ಎಂದು ಮಣಿರಾಜ್ ಶೆಟ್ಟಿ ಕಿಡಿಕಾರಿದರು.
ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಮುಟ್ಲುಪಾಡಿ ಮಾತನಾಡಿ, ವೀರಪ್ಪ ಮೊಯ್ಲಿಯವರು ಮರೋಳಿಯವರ ಹೆಸರು ಪ್ರಸ್ತಾಪಿಸಿ ಮುಂದಿನ ಚುನಾವಣೆಯಲ್ಲಿ ಉದಯ ಶೆಟ್ಟಿ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಇಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದರು. ಕಾರ್ಕಳದ ಅಭಿವೃದ್ಧಿಗೆ, ಬಿಜೆಪಿ ಕಾರ್ಯಕರ್ತರು, ಮುಖಂಡರಿಗೆ ಇಷ್ಟೊಂದು ತೊಂದರೆ ನೀಡುತ್ತಿರುವ ಉದಯ ಶೆಟ್ಟಿಗೆ ಟಿಕೆಟ್ ಇಲ್ಲ ಅನ್ನುವುದು ಆಶ್ಚರಕರ ಎಂದು ವ್ಯಂಗ್ಯವಾಡಿದರು.
ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಅಷ್ಟಮಂಗಳ ಇಡಬೇಕೆಂಬ ಕಾಂಗ್ರೆಸಿಗರ ವಿಚಾರವನ್ನು ಉಲ್ಲೇಖಿಸಿದ ಸತೀಶ್ ಮುಟ್ಲುಪಾಡಿ ಕಾಂಗ್ರೆಸ್‌ನವರಿಗೆ ಏನಾಗಿದೆ. ಯಾಕೆ ಇಷ್ಟೊಂದು ಉಪದ್ರ ನೀಡುತ್ತಿದ್ದಾರೆ ಎನ್ನುವ ಕುರಿತು ಆರೂಢ ಪ್ರಶ್ನೆ ಕೇಳಬೇಕಿದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ಕಾಂಗ್ರೆಸ್‌ನವರಿಂದ ನಾವು ರಾಜಕಾರಣ ಕಲಿಯಬೇಕಿಲ್ಲ. ಕಾಂಗ್ರೆಸ್‌ನ ನೀಚ ರಾಜಕಾರಣದ ಬಗ್ಗೆ ಜನತೆಗೆ ಮನವರಿಕೆ ಆಗಿದ್ದು ಜನರೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಮಿತ್ ಕೌಡೂರು ಮಾತನಾಡಿ, ಕಾಂಗ್ರೆಸ್‌ನವರು ಸರಕಾರದ ಮೇಲೆ ಒತ್ತಡ ಹೇರಿ ಪರಶುರಾಮ ಥೀಮ್ ಪಾರ್ಕ್ ಪೂರ್ಣಗೊಳಿಸುವ ಕಾರ್ಯ ಮಾಡಬೇಕಿತ್ತು. ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಆ ಕೆಲಸ ಆಗದಿದ್ದಲ್ಲಿ ಬೈಲೂರಿನ ಜನತೆಯೇ ಆ ಕಾರ್ಯವನ್ನು ಮಾಡಲಿದ್ದಾರೆ ಎಂದರು.
ವಿಖ್ಯಾತ್ ಶೆಟ್ಟಿ ಮಾತನಾಡಿ, ಬೈಲೂರಿನಲ್ಲಿ ಅಷ್ಟಮಂಗಳ ಪ್ರಶ್ನೆ ಇಡಬೇಕೆಂದವರ ಗೆಳೆಯನ ಕ್ರಷರ್ ಅಲ್ಲಿ ನಡೆಯುತ್ತಿದ್ದ ಸಂದರ್ಭ ದೈವ ದೇವರ ನೆನಪಾಗಿಲ್ಲ. ಅಷ್ಟಮಂಗಳ ಇಡಬೇಕೆಂಬುವುದು ಅರಿವಿಗೆ ಬಂದಿಲ್ಲ. ಪರಶುರಾಮ ಮೂರ್ತಿ ಸಂಪೂರ್ಣಗೊಳಿಸದಿದಲ್ಲಿ ಮುಂದಿನ ದಿನಗಳಲ್ಲಿ ಯುವಮೋರ್ಚಾ ವತಿಯಿಂದ ಪರಶುರಾಮನ ಬಿಡಿಭಾಗ ಇರುವಲ್ಲಿಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.
ಕಾರ್ಕಳ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಮಾತನಾಡಿ, ಕಳೆದ ವಿಧಾನ ಸಭಾ ಚುನಾವಣೆಯ ನಂತರ ಕಾರ್ಕಳದ ರಾಜಕಾರಣ ಬದಲಾಯಿತು. ಧರ್ಮದ ರಾಜಕಾರಣ ಬದಲು ದ್ವೇಷದ ರಾಜಕಾರಣ ಪ್ರಾರಂಭವಾಯಿತು. ಇದೇ ಕಾರಣಕ್ಕಾಗಿ ಪರಶುರಾಮ ಥೀಮ್ ಪಾರ್ಕ್ ಬಲಿಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಾದ ಜಯರಾಮ ಸಾಲಿಯಾನ್, ಬೋಳ ಸತೀಶ್, ಸುಹಾಸ್ ಶೆಟ್ಟಿ ಮುಟ್ಲುಪಾಡಿ, ವಿನಯಾ ಡಿ. ಬಂಗೇರ, ಮಾಲಿನಿ ಜೆ. ಶೆಟ್ಟಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಬೈಲೂರಿನವರು ಉಪಸ್ಥಿತರಿದ್ದರು.