.jpeg)
ವಕ್ಫ್ ತಿದ್ದುಪಡಿ ಕರಡು ಮೇಲ್ನೋಟಕ್ಕೆ ನೋಡುವಾಗ ಸಂವಿಧಾನಕ್ಕೆ ವಿರುದ್ಧ ಅಂತ ಕಾಣುತ್ತಿದೆ: ಯು.ಟಿ. ಖಾದರ್
ಮಂಗಳೂರು: ಸಂವಿಧಾನಕ್ಕೆ ವಿರುದ್ಧವಾದದ್ದು ಯಾವುದೂ ಕೂಡ ಸರಿಯಲ್ಲ. ವಕ್ಫ್ ತಿದ್ದುಪಡಿ ಕರಡು ಮೇಲ್ನೋಟಕ್ಕೆ ನೋಡುವಾಗ ಸಂವಿಧಾನಕ್ಕೆ ವಿರುದ್ಧ ಅಂತ ಕಾಣುತ್ತಿದೆ ಎಂದು ವಿಧಾನ ಸಭಾಧ್ಯಕ್ಷ ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ ವಿರುದ್ಧ ವ್ಯಾಪಕ ಆಕ್ರೋಶ, ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಅಂಬೇಡ್ಕರ್ ಸಂವಿಧಾನಕ್ಕೆ ಅನುಗುಣವಾಗಿ ಇದ್ದರೆ ದೇಶದ ಎಲ್ಲಾ ಜನರು ಸಂತೋಷವಾಗಿರುತ್ತಾರೆ. ಇವತ್ತು ಈ ತಿದ್ದುಪಡಿ ಸಂವಿಧಾನ ವಿರೋಧಿಯಾಗಿದೆ. ಅದನ್ನ ಜನರು ಒಪ್ಪಲು ಸಾಧ್ಯವಿಲ್ಲ. ಏನೋ ದುರುದ್ದೇಶಪೂರ್ವಕವಾಗಿ ರೂಪಿಸಲಾದ ತಿದ್ದುಪಡಿ ಕಾಯಿದೆ ಆಗಿದೆ ಎಂದು ಹೇಳಿದರು.
ಏನೋ ಒಂದು ಉದ್ದೇಶದಿಂದ ಧ್ವನಿವರ್ಧಕ ಬಂದ್ ಮಾಡಿ ಬಿಂಬಿಸಿದ್ರು. ತಿಂಗಳುಗಟ್ಟಲೇ ನಾಟಕ ಆಯಿತು. ಜನರಲ್ಲಿ ಗೊಂದಲ ಮೂಡಿಸಿದರು. ಈಗ ಅಧಿಕಾರಿಗಳು ಬಂದು ಯಕ್ಷಗಾನವನ್ನೇ ನಿಲ್ಲಿಸುತ್ತಿದ್ದಾರೆ. ಯಾಕೆ ನಿಲ್ಲಿಸುತ್ತಾರೆ ಅಂದರೆ, ಇವರು ಮಾಡಿದ ಕಾನೂನಿನ ಕಾರಣಕ್ಕಾಗಿ ನಿಲ್ಲಿಸುತ್ತಾರೆ. ಕಾನೂನನ್ನ ದುರುದ್ದೇಶ ಇಟ್ಟುಕೊಂಡು ಮಾಡಿದರೆ ಹೀಗೇ ಆಗೋದು. ಒಬ್ಬೊಬ್ಬ ಅಧಿಕಾರಿ ಬಂದಾಗ ಅವರಿಗೆ ಇಷ್ಟ ಬಂದ ಹಾಗೆ ಕಾನೂನು ಪಾಲಿಸ್ತಾರೆ. ಹಾಗಾಗಿ ಸಮಸ್ಯೆಯಿಂದ ಮತ್ತೆ ಮತ್ತೆ ಸಮಸ್ಯೆ ಸೃಷ್ಟಿಸಬಾರದು ಎಂದು ತಿಳಿಸಿದರು.
ಸಂವಿಧಾನಕ್ಕೆ ಅನುಗುಣವಾಗಿ ಇರದ ಈ ತಿದ್ದುಪಡಿ ಸರಿಯಲ್ಲ. ಸ್ವಾಭಾವಿಕವಾಗಿ ಇದರ ವಿರುದ್ಧ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಪ್ರಜಾಪ್ರಭುತ್ವದ ಒಂದು ಸೌಂದರ್ಯ. ಅದು ಕಾನೂನು ರೀತಿಯಲ್ಲಿ ಇರಬೇಕು. ಸಂವಿಧಾನಾತ್ಮಕ ರೀತಿಯಲ್ಲೇ ಹೋರಾಟ ಮಾಡಬೇಕು. ಉಲೇಮಾಗಳು ಗೌರವಪೂರ್ವಕವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲಾ ಯುವಕರು ಉಲೇಮಾಗಳ ಹಾಗೂ ಹಿರಿಯರ ಸಲಹೆ, ಮಾರ್ಗದರ್ಶನ ಪಡೆಯಿರಿ ಎಂದು ತಿಳಿಹೇಳಿದರು.
ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಸರಿಯಾಗಿ ಆಲೋಚನೆ ಮಾಡಲಿ. ಈ ಭಾಗದಲ್ಲಿ ವಕ್ಫ್ ಆಸ್ತಿ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ ಆ ಭಾಗದಲ್ಲಿ ಇದೆ ಎಂದರು.
ಜಿಲ್ಲೆಗೆ ಹಲವಾರು ಯೋಜನೆ..
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾರ್ಚ್ 7ರಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಲವಾರು ಯೋಜನೆಗಳು ಮಂಜೂರಾಗಿದೆ. ಈ ಪೈಕಿ ಕರಾವಳಿಯ ಪ್ರಮುಖ ಸಮಸ್ಯೆಯಾದ ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಲು ರೂ.200 ಕೋಟಿ ಮೀಸಲಾಗಿಡಲಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಎರಡು ಹೊಸ ಸೇತುವೆಗಳನ್ನು ನಿರ್ಮಿಸಲಾಗುವುದು. ಮಂಗಳೂರಿನ ವೆಸ್ಲಾಕ್ ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳನ್ನು ಒಟ್ಟು 650 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುವುದು. ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮ ವಹಿಸಲಾಗುವುದು ಎಂದರು.