
ನೇಮೋತ್ಸವ ಸ್ಥಗಿತ-ಊಹಾಪೋಹ ನಂಬಬೇಡಿ: ಕಿರಣ್‌ಕುಮಾರ್ ಕೋಡಿಕಲ್
ಮಂಗಳೂರು: ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ, ವೈದ್ಯನಾಥ ದೈವಸ್ಥಾನದ ನೇಮವನ್ನು ರಾಜಕೀಯ ಪ್ರೇರಿತವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಕೆಲವರು ಮಾಧ್ಯಮದ ಮೂಲಕ ತಪ್ಪು ಮಾಹಿತಿ ನೀಡಿದ್ದಾರೆ. ತಪ್ಪು ಸಂದೇಶ ನೀಡುವ ಊಹಾಪೋಹದ ಸುದ್ದಿಗಳನ್ನು ಯಾರೂ ನಂಬಬಾರದು ಎಂದು ದೈವಸ್ಥಾನಕ್ಕೆ ಸಂಬಂಧಿಸಿದ ಗುತ್ತುಮನೆಯವರಾದ ಮಂಗಳೂರಿನ ನಿಕಟಪೂರ್ವ ಕಾರ್ಪೋರೇಟರ್ ಕಿರಣ್‌ಕುಮಾರ್ ಕೋಡಿಕಲ್ ಹೇಳಿದರು.
ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ, ಅರಸು ವೈದ್ಯನಾಥ ದೈವಸ್ಥಾನಕ್ಕೆ 600 ವರ್ಷಗಳ ಇತಿಹಾಸವಿದ್ದು, ಇರಂತಬೆಟ್ಟು, ಬಾವ, ಬರ್ಕೆ, ಕೊಲ್ಲೂರು ಮನೆತನಗಳ ಜತೆ ಊರ ಹತ್ತು ಸಮಸ್ತರು ಸೇರಿಕೊಂಡು ನೇಮೋತ್ಸವ ಮಾ.9ರಿಂದ 11ರವರೆಗೆ ನಡೆಯಬೇಕಿತ್ತು. ಆದರೆ, ಕೆಲವರು ಪ್ರತ್ಯೇಕ ಸಮಿತಿ ರಚಿಸಿ ನಾವೇ ನೇಮ ನಡೆಸುತ್ತೇವೆ ಎಂದು ಪ್ರಚಾರ ಮಾಡಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದರು. ನಾವು ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ನೇಮೋತ್ಸವ ನಡೆಸುವುದಕ್ಕೆ ನಮ್ಮ ಪರವಾಗಿ ನ್ಯಾಯಾಲಯದಿಂದ ಆದೇಶ ಬಂದಿತ್ತು. ಹಿಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಹಾಯಕ ಆಯುಕ್ತರೂ ಮೊದಲ ಆದೇಶದಲ್ಲಿ ನೇಮ ನಡೆಸುವುದಕ್ಕೆ ನಮಗೆ ಅನುಮತಿ ನೀಡಿದ್ದರು. ಆದರೆ, ರಾಜಕೀಯ ಒತ್ತಡ ಹೇರಿ ಎರಡನೇ ಆದೇಶ ಹೊರಡಿಸಿ ನೇಮ ಸ್ಥಗಿತಕ್ಕೆ ಕಾರಣರಾಗಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
ನೇಮ ಸ್ಥಗಿತ ವಿಚಾರಕ್ಕೂ ಕನ್ಯಾಡಿ ಸ್ವಾಮೀಜಿ ಅವರಿಗೂ ಸಂಬಂಧವೇ ಇಲ್ಲ. ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜ ಅವರಿಗೂ ಈ ವಿಚಾರಗಳು ತಿಳಿದಿಲ್ಲ. ಅವರೆಲ್ಲರ ಮೇಲೆ ವಿನಾಕಾರಣ ಆರೋಪ ಹೊರಿಸಲಾಗಿದೆ. ಮಾಜಿ ಸಚಿವ ರಮಾನಾಥ ರೈ ಅವರ ಮೇಲೂ ಆರೋಪ ಹೊರಿಸಿರುವುದು ತಪ್ಪು ಎಂದರು.
ಹಿಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಅಧಿಕಾರಿ ಎರಡೆರಡು ಆದೇಶ ಹೊರಡಿಸಿದ ಬಗ್ಗೆ ಜಿಲ್ಲಾಽಕಾರಿ ಮಧ್ಯಪ್ರವೇಶ ಮಾಡಬೇಕು. ದೈವಸ್ಥಾನದಲ್ಲಿ ಕಂಚಿಲ ಸೇವೆಯೂ ಸ್ಥಗಿತಗೊಂಡಿದೆ. ನೇಮ ಸ್ಥಗಿತಕ್ಕೆ ಯಾರು ಕಾರಣರೋ ಅವರಿಗೆ ಅದರ ಶಾಪ ತಟ್ಟಲಿ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ವಿರುದ್ಧ ಅಪಪ್ರಚಾರ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇರಂತಬೆಟ್ಟು ಗಡಿಪ್ರಧಾನರಾದ ವಿಶ್ವನಾಥ ಪೂಜಾರಿ, ಬರ್ಕೆ ಕುಟುಂಬದ ಆಡಳಿತ ಮೊಕ್ತೇಸರ ಮೋನಪ್ಪ ಸಫಲ್ಯ, ಕೊಲ್ಲೂರು ಕುಟುಂಬದ ಕೃಷ್ಣಪ್ಪ ಗಾಣಿಗ, ಭಂಡಾರಮನೆಯ ವೈದ್ಯನಾಥ ಪೂಜಾರಿ ಸೀತಾರಾಮ ಪೂಜಾರಿ, ಊರಿನ ಪ್ರಮುಖರಾದ ಕರುಣಾಕರ ಶೆಟ್ಟಿ ಕಕ್ಕೆಮಜಲು, ದಿವಾಕರ ಪೊರ್ಸಪಾಲು ಮತ್ತಿತರರು ಉಪಸ್ಥಿತರಿದ್ದರು.