
ದಕ್ಷಿಣ ಕನ್ನಡ ಜಿಲ್ಲೆಗೆ ನಿರಾಶಾದಾಯಕ ಬಜೆಟ್: ಡಿವೈಎಫ್‌ಐ
ಮಂಗಳೂರು: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರು ಮಂಡಿಸಿದ ಈ ಸಾಲಿನ (2025-26) ಆಯವ್ಯಯ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಮತ್ತು ಯುವಜನರಿಗೆ ಯಾವೊಂದು ಕೊಡುಗೆಗಳನ್ನು ನೀಡದ ಯುವಜನರ ಬದುಕಿನ ಭದ್ರತೆ ಖಾತ್ರಿಪಡಿಸದ ನಿರಾಶಾದಾಯಕ ಬಜೆಟ್ ಎಂದು ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ದೂರಿದೆ.
ದಕ್ಷಿಣ ಕನ್ನಡ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಕೂಗಿಗೆ ಕೇವಲ ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸುವ ಘೋಷಣೆಯನ್ನಷ್ಟೆ ಮಾಡಲಾಗಿದೆ. ಮತ್ತು ಅದಕ್ಕೆ ಪೂರಕವಾಗಿ ಅಲ್ಲಿನ ತಾಲೂಕು ಆಸ್ಪತ್ರೆ ಉನ್ನತೀಕರಣದ ಕ್ರಮಗಳ ಪ್ರಸ್ತಾಪವನ್ನು ಮಾಡಿದ್ದು ಬಿಟ್ಟರೆ ಬಜೆಟ್‌ನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒಂದು ಬಿಡಿಗಾಸನ್ನೂ ಮೀಸಲಿಟ್ಟಿಲ್ಲ. ಇನ್ನು ಸರಕಾರಿ ಜಿಲ್ಲಾಸ್ಪತ್ರೆ ವೆನ್ಲಾಕಿನ ನವೀಕರಣಕ್ಕೆ ರಾಜ್ಯದ ಹತ್ತು ವಿವಿಧ ಸರಕಾರಿ ಆಸ್ಪತ್ರೆಗಳ ಜೊತೆಗಳನ್ನು ಜೊತೆ ಸೇರಿಸಿ 650 ಕೋಟಿ ಮೀಸಲಿಟ್ಟಿರುತ್ತಾರೆಯೇ ಹೊರತು ವೆನ್‌ಲಾಕ್ ಅನ್ನು ಪ್ರಾದೇಶಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಕೂಗಿಗೆ ಯಾವುದೇ ಸ್ಪಂದನೆ ನೀಡಿಲ್ಲ. ಇನ್ನು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯ ಸಂಬಂಧಿಸಿದ ಆಸ್ಪತ್ರೆಯ ಘಟಕಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸುವ ಕುರಿತು ಬಲವಾದ ಆಗ್ರಹಗಳಿದ್ದರೂ ಬಜೆಟ್‌ನಲ್ಲಿ ಈ ಬೇಡಿಕೆಗಳನ್ನು ಕಡೆಗಣಿಸಲಾಗಿದೆ. ಸರಕಾರ ಸಂಪೂರ್ಣ ಖಾಸಗಿ ಮೆಡಿಕಲ್ ಮಾಫಿಯಾದ ಲಾಭಿಗೆ ಶರಣಾಗಿದೆ. ಸರಕಾರದ ವೈದ್ಯಕೀಯ ನಿಯಮಗಳಿಗನುಸಾರವಾಗಿ ಮುಲ್ಕಿ, ಮೂಡಬಿದರೆ, ಕಡಬ ಮತ್ತು ಉಳ್ಳಾಲ ತಾಲೂಕಿನಲ್ಲಿ ಸ್ಥಾಪಿಸಬೇಕಿದ್ದ ತಾಲೂಕು ಆಸ್ಪತ್ರೆಗಳ ಸ್ಥಾಪನೆ ಕುರಿತು ಉಲ್ಲೇಖಗಳಿಲ್ಲದೆ ಸಂಪೂರ್ಣ ಕಡೆಗಣಿಸಲಾಗಿದೆ. ಒಟ್ಟು ಆಸ್ಪತ್ರೆಗಳ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಗೆ ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಯನ್ನು ಕಡೆಗಣಿಸುವ ಮೂಲಕ ಖಾಸಗಿ ಆಸ್ಪತ್ರೆಗಳ ಸುಲಿಗೆ ನೀತಿಗಳನ್ನು ಎತ್ತಿ ಹಿಡಿಯುವ ಬಜೆಟಾಗಿ ಪರಿವರ್ತನೆಗೊಂಡಿದೆ.
ಕೈಗಾರಿಕೆಗಳ ಸ್ಥಾಪನೆಯಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳಾಗಲಿ ಕನಿಷ್ಟ ಇರುವ ಕೈಗಾರಿಕೆಗಳಲ್ಲಿ ಸೃಷ್ಟಿಯಾಗುವ ಉದ್ಯೋಗಳಿಗೆ ಸ್ಥಳೀಯ ಯುವಜನರಿಗೆ ಆಧ್ಯತೆ ಕಲ್ಪಿಸುವ ನೀತಿಗಳಿಲ್ಲ. ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಉದ್ಯೋಗಗಳ ಭರ್ತಿಗೆ ಕ್ರಮಗಳಿಲ್ಲ. ಸರಕಾರಿ ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಖಾಯಂಗೊಳಿಸುವ ಕ್ರಮಗಳಿಲ್ಲ. ಈ ಹಿಂದೆ ಪ್ರಸ್ತಾಪಿಸಿದ್ದ ಖಾಸಗೀ ವಲಯ ರಂಗದಲ್ಲೂ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ನೀತಿಗಳನ್ನು ಸಂಪೂರ್ಣ ಕೈಬಿಟ್ಟಿರುವುದು ಯುವಜನರಲ್ಲಿ ನಿರಾಶೆಯನ್ನು ಮೂಡಿಸಿದೆ. ಕನಿಷ್ಟ ಯುವಜನರ ಪರವಾದ ರಾಜ್ಯ ಯುವ ನೀತಿಗಳ ರೂಪಿಸುವ ಬಗ್ಗೆ ಯೋಜನೆಗಳೇ ಇಲ್ಲದಿರುವಂತಹ ಬಜೆಟ್ ಸಂಪೂರ್ಣ ಯುವಜನ ವಿರೋಧಿ ಬಜೆಟ್ ಎಂದು ದೂರಿದೆ.
ಒಟ್ಟು ಕರ್ನಾಟಕ ರಾಜ್ಯದ ಈ ಬಾರಿಯ ಬಜೆಟ್ ನಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಆಶಾದಾಯಕ ಯೋಜನೆಗಳಿಲ್ಲ ಸರಕಾರಿ ಆಸ್ಪತ್ರೆಗಳಿಂದ ಹಿಡಿದು ಪ್ರವಾಸೋದ್ಯಮಕ್ಕೆ ಉತ್ತೇಜನವಾಗಲಿ, ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಗಳ ಪ್ರಸ್ತಾಪವಾಗಲಿ, ಪರಿಸರ ಸ್ನೇಹಿ ಕೈಗಾರಿಕೆಗಳನ್ನು ಸ್ಥಾಪಿಸುವ, ಇರುವ ಕೈಗಾರಿಕೆಗಳಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಕುರಿತು ಯಾವೊಂದು ಯೋಜನೆಗಳಿರದ ನಿರಾಶಾದಾಯಕ ಮತ್ತು ಯುವಜನ ವಿರೋಧಿ ಬಜೆಟ್ ಎಂದು ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.