
ಆರ್ಥಿಕ ಸುಧಾರಣೆಗೆ ದಿಟ್ಟ ಹೆಜ್ಜೆ ಇಲ್ಲದ ಬಜೆಟ್: ವೆಲ್ಫೇರ್ ಪಾರ್ಟಿ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ರ ಬಜೆಟ್‌ನಲ್ಲಿ ಆರ್ಥಿಕ ಸುಧಾರಣೆ, ಸಬಲೀಕರಣದತ್ತ ಯಾವುದೇ ದಿಟ್ಟ ಹೆಜ್ಜೆ ಇಲ್ಲ. ಬಜೆಟ್ ಜನರ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಿ, ನಿರಾಶಾದಾಯಕವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಅಭಿಪ್ರಾಯ ವ್ಯಕ್ತಪಡಿಸಿದರು.
2024-25 ಸಾಲಿನಲ್ಲಿ ರಾಜ್ಯದ ಆದಾಯ 10,000 ಕೋಟಿ ಕುಸಿತವಾಗಿದ್ದು 2024-25ರ ಬಂಡವಾಳ ವೆಚ್ಚ ಇಳಿಮುಖ ಹಾಗೂ ಅಭಿವೃದ್ಧಿ ಕುಂಠಿತವಾಗಿದೆ. ಸಿದ್ದರಾಮಯ್ಯನವರು ಮಂಡಿಸಿದ ದಾಖಲೆಯ 16ನೇ ಬಜೆಟ್ ರಾಜ್ಯದ ಯುವಜನರ ಬದುಕಿನ ಭದ್ರತೆಯ ಕುರಿತು ಯಾವುದೆ ಸ್ಪಷ್ಟ ಕಣ್ಣೋಟ ಹೊಂದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಶಿಕ್ಷಣ ಇಲಾಖೆಯಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದು ಎಂಬ ಒಂದಂಶ ಹೊರತುಪಡಿಸಿದರೆ, ರಾಜ್ಯ ಸರಕಾರದಡಿ ಖಾಲಿಯಿರುವ ಎರಡು ಲಕ್ಷ ಎಪ್ಪತ್ತು ಸಾವಿರ ಹುದ್ದೆಗಳ ಭರ್ತಿಗೂ ಯಾವುದೇ ಕ್ರಮ ಕೈಗೊಂಡಿಲ್ಲ ಅಲ್ಲದೇ ರಾಜ್ಯಕ್ಕೆ ಅಗತ್ಯವಿರುವ ಯುವ ನೀತಿಯನ್ನೂ ಕೂಡ ಜಾರಿ ಮಾಡಲು ಮುಂದಾಗಿಲ್ಲ. ಇದು ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಜನರಿಗೆ ಸಹಜವಾಗಿಯೇ ನಿರಾಸೆ ಮೂಡಿಸಿದ ಬಜೆಟ್ ಆಗಿದೆ.
ಒಟ್ಟು ಸಾಲ 7,64,655 ಕೋಟಿ (ಜಿಎಸ್‌ಡಿಪಿಯ 25%) ಏರಿಕೆಯಾಗಿದೆ. ಇದು ಆರ್ಥಿಕ ದಿವಾಳಿತನ ಕಡೆಗೆ ಸಾಗುತ್ತಿರುವುದಕ್ಕೆ ಸ್ಪಷ್ಟ ಸಂಕೇತವಾಗಿದೆ. ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಅನುದಾನ ಕಡಿತ ಮಾಡಿರುವುದು ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ.
ಈ ಬಾರಿಯ ಬಜೆಟ್‌ನಲ್ಲಿ ನೀರಾವರಿ, ಗ್ರಾಮೀಣಾಭಿವೃದ್ಧಿ, ಕೃಷಿಗೆ ಪ್ರತ್ಯೇಕ ಅನುದಾನವಿಲ್ಲ. ಹಾಗಾಗಿ ಈ ಬಜೆಟ್ ಜನ ಪರ ಬಜೆಟ್ ಆಗಿರವುದಿಲ್ಲ ಎಂದು ಹೇಳಿದರು.
ಅಲ್ಪಸಂಖ್ಯಾತರಿಗೆ ಸಮುದಾಯಕ್ಕೆ ನಿರಾಶಾದಾಯಕ ಬಜೆಟ್:
ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 10,000 ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದರು ಆದರೆ ನಿನ್ನೆ ಮಂಡಿಸಿದ ಬಜೆಟ್‌ನಲ್ಲಿ ಕೇವಲ 4700 ಕೋಟಿ ರೂ. ನೀಡಿ ರಾಜ್ಯದ ಒಂದು ಕೋಟಿಯಷ್ಟಿರುವ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದಾರೆ.ಜನ ಸಂಖ್ಯೆಗೆ ಅನುಗುಣವಾಗಿ ಪಾಲು ನೀಡಲು ಸಾಧ್ಯವಾಗದೆ ಇದಲ್ಲಿ ಕನಿಷ್ಠ 7 ಸಾವಿರ ಕೋಟಿಯಾದರು ನೀಡಬೇಕಿತ್ತು, ಇಮಾಮ್ ಮತ್ತು ಮೌಝಿನ್ ಇವರ ಗೌರವ ಧನ 10 ಸಾವಿರ ಮತ್ತು 8 ಸಾವಿರ ಮಾಡಬೇಕಿತ್ತು. ಒಟ್ಟಾರೆ ಮುಖ್ಯ ಮಂತ್ರಿ ಗಳ ಈ ಬಜೆಟ್ ನಿಂದ ನಿರಾಶೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.