
ಪಿ.ಜಿ. ಚೆನ್ನಾಗಿಲ್ಲ ಎಂದು ಸಿಂಗಲ್ ಸ್ಟಾರ್ ರೇಟಿಂಗ್ ನೀಡಿದ ವಿದ್ಯಾರ್ಥಿಗೆ ಹಲ್ಲೆ
Thursday, March 20, 2025
ಮಂಗಳೂರು: ಪಿ.ಜಿ. (ಪೇಯಿಂಗ್ ಗೆಸ್ಟ್) ಬಗ್ಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು ಚೆನ್ನಾಗಿಲ್ಲ ಎಂದು ಕಮೆಂಟ್ ಹಾಕಿದ್ದಕ್ಕೆ ಪಿ.ಜಿ. ಮಾಲಕ ಮತ್ತು ಆತನ ಸಹಚರರು ಸೇರಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆಗೈದ ಘಟನೆ ನಗರದಲ್ಲಿ ನಡೆದಿದೆ.
ನಗರದಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವ ಕಲಬುರಗಿ ಜಿಲ್ಲೆಯ ಮೂಲದ ವಿಕಾಸ್ (18) ಎಂಬಾತನ ಮೇಲೆ ಮಾರ್ಚ್ 17ರ ರಾತ್ರಿಗೆ ಹಲ್ಲೆ ನಡೆಸಲಾಗಿದ್ದು, ಕದ್ರಿ ದೇವಸ್ಥಾನದ ಬಳಿಯ ಕುಕ್ಕೆಶ್ರೀ ಬಾಯ್ಸ್ ಪಿಜಿ ವಿರುದ್ಧ ವಿದ್ಯಾರ್ಥಿ ಕದ್ರಿ ಠಾಣೆಗೆ ಪೊಲೀಸ್ ದೂರು ನೀಡಿದ್ದಾನೆ.
ವಿಕಾಸ್ ಕಳೆದ ಆರು ತಿಂಗಳಿನಿಂದ ಕುಕ್ಕೆಶ್ರೀ ಪಿಜಿಯಲ್ಲಿದ್ದು, ಊಟದಲ್ಲಿ ಹುಳ ಬಿದ್ದಿರುವುದು, ಶುಚಿತ್ವ ಇಲ್ಲದಿರುವುದು, ಅತಿ ಕೆಟ್ಟ ಶೌಚಾಲಯ ಇದರಿಂದ ಬೇಸತ್ತು ಬೇರೆ ಪಿ. ಜಿ. ಗೆ ಹೋಗಿದ್ದ. ಈ ಬಗ್ಗೆ ಗೂಗಲ್‌ನಲ್ಲಿ ಕುಕ್ಕೆಶ್ರೀ ಪಿ.ಜಿ. ಬಗ್ಗೆ ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟು ಏನೂ ಚೆನ್ನಾಗಿಲ್ಲ ಎಂದು ಕಮೆಂಟ್ ಹಾಕಿದ್ದ. ಇದನ್ನು ಗಮನಿಸಿದ ಪಿ.ಜಿ. ಮಾಲಕ ಸಂತೋಷ್ ಎಂಬಾತ, ಕಮೆಂಟ್ ಅಳಿಸಿ ಹಾಕುವಂತೆ ಬೆದರಿಕೆ ಹಾಕಿದ್ದ. ಅಳಿಸಿ ಹಾಕದಿರುವುದಕ್ಕೆ ಸಂತೋಷ್ ಮತ್ತು ಆತನ ಸಹಚರರು ಸೇರಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿ ಕದ್ರಿ ಪೊಲೀಸ್ ಠಾಣೆಎ ದೂರು ನೀಡಿದರೂ ಕೈಯಿಂದ ಹಲ್ಲೆ ಮಾಡಿದ್ದು ತೊಂದರೆ ಇಲ್ಲ ಎಂದು ಹೇಳಿ ಪ್ರಕರಣ ದಾಖಲಿಸಲಾಗಿಲ್ಲ. ಪೊಲೀಸರು ದೂರು ಪಡೆದು ಹಿಂದಕ್ಕೆ ಕಳಿಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿ ವಿಕಾಸ್ ಪ್ರತಿಕ್ರಿಯಿಸಿ, ‘ನಾವು ಪೊಲೀಸ್ ದೂರು ಕೊಟ್ಟಿದ್ದೇವೆ, ಆದರೆ ಕೈಯಲ್ಲಿ ಹಲ್ಲೆ ಮಾಡಿದ್ದಕ್ಕೆ ದೂರು ದಾಖಲು ಮಾಡುವುದಿಲ್ಲ ಎಂದಿದ್ದಾರೆ. ನಮಗೇನೂ ಗೊತ್ತಿರಲಿಲ್ಲ. ವಿದ್ಯಾರ್ಥಿ ಸಂಘಟನೆಯವರದ್ದೂ ಪರಿಚಯ ಇಲ್ಲ. ಅಲ್ಲಿ ಪಿ.ಜಿ. ಏನೂ ಚೆನ್ನಾಗಿಲ್ಲ. ನಾನೂ ಅಲ್ಲಿದ್ದೆ. ಹಾಗಾಗಿ ಕಮೆಂಟ್ ಹಾಕಿದ್ದೆ. ಅದಕ್ಕೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದಿದ್ದಾನೆ.