
ನಂದಿನಿ ಹಾಲು, ವಿದ್ಯುತ್ ದರ ಏರಿಕೆಗೆ ಡಿವೈಎಫ್ಐ ವಿರೋಧ
ಮಂಗಳೂರು: ಕರ್ನಾಟಕ ರಾಜ್ಯ ಸರಕಾರ ನಂದಿನಿ ಹಾಲಿನ ದರವನ್ನು ಪ್ರತೀ ಲೀಟರ್ ಗೆ 4ರೂ ಹಾಗೂ ವಿದ್ಯುತ್ ಪ್ರತೀ ಯೂನಿಟ್ ಗೆ 36ಪೈಸೆ ದರ ಹೆಚ್ಚಳ ಮಾಡಿ ಎಪ್ರೀಲ್ ತಿಂಗಳಿನಿಂದ ಜಾರಿಗೆ ಬರುವಂತೆ ಕೈಗೊಂಡಿರುವ ತೀರ್ಮಾನವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ವಿರೋಧವನ್ನು ವ್ಯಕ್ತಪಡಿಸುತ್ತದೆ. ಇದು ಒಂದು ಕಡೆಯಿಂದ ಕೊಟ್ಟು ಇನ್ನೊಂದು ಕಡೆಯಿಂದ ಕಸಿಯುವ ಯೋಜನೆಯೆಂದು ದೂರಿದೆ.
ಈಗಾಗಲೇ ರಾಜ್ಯದ ಜನತೆ ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಯ ಖುಷಿಯನ್ನು ಜನಸಾಮಾನ್ಯರು ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ದಿನದಿಂದ ದಿನಕ್ಕೆ ಎಲ್ಲಾ ಅಗತ್ಯ ವಸ್ತಗಳ ವಿಪರೀತ ಬೆಲೆ ಏರಿಕೆಯ ತೀರ್ಮಾನದಿಂದ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಇತ್ತೀಚೆಗಷ್ಟೆ ಸಾರ್ವಜನಿಕ ಸಾರಿಗೆ ಬಸ್ಸು ಪ್ರಯಾಣ ದರ ಶೇ 15%, ಪೆಟ್ರೋಲ್ ಡಿಸೇಲ್ ರಾಜ್ಯದ ತೆರಿಗೆ ಶೇ 4% ದರ ಏರಿಕೆಯು ರಾಜ್ಯದ ಜನರ ಹೊರೆಯನ್ನು ಹೆಚ್ಚಿಸಿದೆ. ಅದೇ ರೀತಿ ಗೃಹ ಬಳಕೆಗೆ ಉಪಯೋಗಿಸುವ ದಿನಸಿ ಸಮಾಗ್ರಿಗಳಿಂದ ಹಿಡಿದು ಹಾಲಿನ ದರದವರೆಗೂ ಮೇಲಿಂದ ಮೇಲೆ ಹೆಚ್ಚಳ ಮಾಡಿದ ತೀರ್ಮಾನ ಜನಸಾಮಾನ್ಯರ ಬದುಕಿಗೆ ಬಹುದೊಡ್ಡ ಹೊಡೆತವನ್ನು ಕೊಟ್ಟಿದೆ.
ಕರ್ನಾಟಕ ರಾಜ್ಯ ಸರಕಾರ ಈ ಹಿಂದೆ ಹಾಲಿನ ದರ ಏರಿಕೆ ಮಾಡಿ ಅದಕ್ಕೆ ತಕ್ಕಂತೆ ಹೆಚ್ಚುವರಿ ಹಾಲನ್ನು ಸೇರಿ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿಕೆ ನೀಡಿದ ಬೆನ್ನಲ್ಲೇ ಈಗ ಮತ್ತೆ ಹಾಲಿನ ದರದಲ್ಲಿ ರೂ 4 ಹೆಚ್ಚಳ ಮಾಡಿದ ತೀರ್ಮಾನದಿಂದ ಜನ ಬಾನಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಮತ್ತೊಂದೆಡೆ ವಿದ್ಯುತ್ ಪ್ರಸರಣ ಸಿಬ್ಬಂದಿಗಳ ಪಿಂಚಣಿ ಮತ್ತು ಗ್ರಾಚ್ಯುಟಿ ಪಾವತಿಸಲೆಂದು ವಿದ್ಯುತ್ ದರದಲ್ಲಿ ಪ್ರತೀ ಯೂನಿಟ್ ಗೆ 36ಪೈಸೆ ಹೆಚ್ಚಳ ಮಾಡುವ ತೀರ್ಮಾನವು ಬಡವರ ಬದುಕಿಗೆ ಬರೆ ಇಟ್ಟಾಂತಾಗಿದೆ.
ಈಗಾಗಲೇ ದೇಶದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿದೆ. ನಾಡಿನ ಜನತೆ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ರೋಸಿಹೋಗಿದ್ದು ಇದೇ ಸಂದರ್ಭದಲ್ಲಿ ರಾಜ್ಯ ಸರಕಾರ ಹಾಲು, ವಿದ್ಯುತ್ ದರ ಸಹಿತ ಎಲ್ಲದರ ದರ ಏರಿಕೆಗೊಳಿಸುವ ಕ್ರಮ ಸರಿಯಲ್ಲ ಇಂತಹ ತೀರ್ಮಾನದಿಂದ ಕೂಡಲೇ ಹಿಂದೆ ಸರಿಯಬೇಕು. ಸದ್ಯ ಏರಿಸಿರುವ ಹಾಲಿನ ಮತ್ತು ವಿದ್ಯುತ್ ದರವನ್ನು ಕೈಬಿಡಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.