
ಕೋಮುವಾದದ ಹೆಸರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಲಿ: ರಾಧಾ ಮೂಡುಬಿದಿರೆ
ಮಂಗಳೂರು: ದೇಶದ ಐಕ್ಯತೆಯನ್ನು ಒಡೆಯಲು ಸಂಚು ರೂಪಿಸುತ್ತಿರುವ ಕೋಮುವಾದಿ ಶಕ್ತಿಗಳು ತನ್ನ ಬೇಳೆ ಬೇಯಿಸಿಕೊಳ್ಳಲು ಮಹಿಳೆಯರನ್ನು ಪ್ರಧಾನ ಅಸ್ತ್ರವನ್ನಾಗಿಸಿದೆ ಮಾತ್ರವಲ್ಲದೆ ಕೋಮುವಾದದ ಪಿಡುಗಿಗೆ ಮೊದಲ ಬಲಿ ಮಹಿಳೆಯೇ ಆಗಿದ್ದಾಳೆ. ಕೋಮುವಾದದ ಹೆಸರಿನಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಮಹಿಳೆಯರು ಸಂಘಟಿತ ಹೋರಾಟ ನಡೆಸಬೇಕೆಂದು ಎಂದು ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷರೂ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಮೂಡುಬಿದಿರೆ ಹೇಳಿದರು.
ಅವರು ಮಂಗಳೂರಿನ ಮಿನಿ ವಿಧಾನಸೌಧದ ಎದುರು ಸಿಐಟಿಯು ಸಂಯೋಜಿತಗೊಂಡಿರುವ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಆಶ್ರಯದಲ್ಲಿ ಜರುಗಿದ 117ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಜಿಲ್ಲಾ ನಾಯಕಿ ಜಯಂತಿ ಬಿ. ಶೆಟ್ಟಿ ಮಾತನಾಡಿ, ಪ್ರತಿಯೊಂದು ಸಂದರ್ಭದಲ್ಲಿಯೂ ಮಹಿಳೆಯರನ್ನು ಅತ್ಯಂತ ತುಚ್ಛವಾಗಿ ಕಾಣುವ ಈ ಸಮಾಜದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚೆಚ್ಚು ಚರ್ಚಿಸುವ ಮೂಲಕ ಮಹಿಳಾ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಮಾಜದ ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಹಿರಿಯ ನಾಯಕಿ ಪದ್ಮಾವತಿ ಶೆಟ್ಟಿ ಮಾತನಾಡಿ, ಜಾಗತೀಕರಣದ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ಭಾರತದಲ್ಲಿ ಮಹಿಳೆಯರ ದುಡಿಮೆಯನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತದೆ. ಕಡಿಮೆ ಕೂಲಿಗೆ ಗರಿಷ್ಠ ಅವಧಿಯಲ್ಲಿ ಮಹಿಳೆಯರನ್ನು ದುಡಿಸುವ ಮೂಲಕ ಮತ್ತೆ ಮಹಿಳೆಯರನ್ನು ಗುಲಾಮರನ್ನಾಗಿಸುವ ವ್ಯವಸ್ಥೆಯನ್ನು ಸ್ಪಷ್ಟಸಲಾಗುತ್ತದೆ ಎಂದು ಹೇಳಿದರು.
ಸಮಾರೋಪ ಭಾಷಣ ಮಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಮಹಿಳೆಯರ ಭಾಗವಹಿಸುವಿಕೆಯಿಲ್ಲದೆ ಸಮಾಜದ ಅಭಿವೃದ್ಧಿ ಯಾವತ್ತೂ ಸಾಧ್ಯವಿಲ್ಲ. ಪ್ರತಿಯೊಂದು ದೇಶದ ಆರ್ಥಿಕತೆಯಲ್ಲಿ ಪ್ರಧಾನ ಪಾತ್ರ ವಹಿಸುವ ಮಹಿಳಾ ವಿಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಆಳುವ ವರ್ಗಗಳು ವಿಶೇಷ ಗಮನ ನೀಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಮುಖಂಡರಾದ ಈಶ್ವರಿ ಬೆಳ್ತಂಗಡಿ, ನಳಿನಾಕ್ಷಿ ಶೆಟ್ಟಿ, ಭಾರತಿ ಬೋಳಾರ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮುಖಂಡರಾದ ಕಿರಣಪ್ರಭಾ, ಅಸುಂತ ಡಿ’ಸೋಜ ಮಾತನಾಡಿದರು. ಮಹಿಳಾ ವಿಮೋಚನೆ ಹಾಗೂ ಮಹಿಳೆಯರ ಸಂಕಷ್ಟಗಳ ಬಗ್ಗೆ ಸುಂದರವಾದ ಹಾಡುಗಳನ್ನು ಮಹಿಳಾ ಮುಖಂಡರಾದ ಗಿರಿಜಾ ಮೂಡಬಿದ್ರೆ, ಜಯಶ್ರೀ ಬೆಳ್ತಂಗಡಿ, ವಸಂತಿ ಕುಪ್ಪೆಪದವುರವರು ಹಾಡಿದರು.
ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ ರೈತ ನಾಯಕರಾದ ಸದಾಶಿವದಾಸ್, ಯುವಜನ ಮುಖಂಡರಾದ ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ಮಹಿಳಾ ಸಂಘಟನೆಗಳ ಮುಖಂಡರಾದ ಪ್ರಮೀಳಾ ದೇವಾಡಿಗ, ಫ್ಲೇವಿ ಕ್ರಾಸ್ತಾ ಅತ್ತಾವರ, ಗ್ರೆಟ್ಟಾ ಟೀಚರ್, ವಿಲಾಸಿನಿ ತೊಕ್ಕೋಟ್ಟು, ಪ್ರಮೋದಿನಿ, ಜಯಲಕ್ಷ್ಮಿ, ರೋಹಿಣಿ,ಗೀತಾ, ಭವಾನಿ ವಾಮಂಜೂರು, ಲಕ್ಷ್ಮಿ ಮೂಡಬಿದ್ರೆ, ಲೋಲಾಕ್ಷಿ ಬಂಟ್ವಾಳ ಭಾಗವಹಿಸಿದ್ದರು. ಜಿಲ್ಲಾ ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರರವರು ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮವನ್ನು ನಿರೂಪಿಸಿದರು.