ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ: ವಿರೋಧಿಸಿ ಬೀದಿಗಿಳಿದ ಬಿಜೆಪಿ

ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ: ವಿರೋಧಿಸಿ ಬೀದಿಗಿಳಿದ ಬಿಜೆಪಿ


ಮಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಮುಸ್ಲಿಂ ಗುತ್ತಿಗೆದಾರರಿಗೆ ಶೇ.4 ಮೀಸಲಾತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಶನಿವಾರ ಪ್ರತಿಭಟನೆ ನಡೆಯಿತು.

ಚಿತ್ರದುರ್ಗ ಸಂಸದ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ದುರಾಡಳಿತ, ಸ್ವಜನ ಪಕ್ಷಪಾತ, ಲೈಂಗಿಕ ಹಗರಣದಲ್ಲಿ ಮುಳುಗಿರುವ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಮೂಲಕ ರಾಜ್ಯದ ಎಸ್.ಸಿ ಹಾಗೂ ಹಿಂದುಳಿದ ವರ್ಗಗಳಿಗೆ ರಾಜ್ಯ ಸರಕಾರ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಮುಸ್ಲಿಂ ಓಲೈಕೆ ನೀತಿಯ ಭಾಗವಾಗಿ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ನೀಚ ಮತ್ತು ಕೀಳುಮಟ್ಟದ ನಿರ್ಧಾರ ರಾಜ್ಯದ ಜನತೆಗೆ ಎಸಗಿದ ದ್ರೋಹವಾಗಿದೆ. ಧರ್ಮಾಧಾರಿತ ಮೀಸಲಾತಿಯನ್ನು ಸಂವಿಧಾನ ರಚಿಸಿದ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಸಂವಿಧಾನ ಉಳಿಸಿ ಎಂದು ಹೇಳುತ್ತಿರುವ ಕಾಂಗ್ರೆಸಿಗರೇ ಈಗ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಆ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣರಾಗಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ಹಿಂದುಗಳ ಓಟ್ಗೆ ಬೆಲೆಯೇ ಇಲ್ಲ. ಸರಕಾರದ ಈ ತಿರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದರು.

ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡುವ ಮೂಲಕ ಎಸ್ಸಿ, ಎಸ್ಟಿ, ಒಬಿಸಿಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರ ಅನ್ಯಾಯ ಮಾಡಿದೆ. ಇಲ್ಲಿನ ಮುಸಲ್ಮಾನರು ವಿದೇಶದಿಂದ ಬಂದವರಲ್ಲ, ಇರಾನ್ ವಂಶಸ್ಥರಲ್ಲ. ಈ ಹಿಂದೆ ಮತಾಂತರಗೊಂಡವರಾಗಿದ್ದಾರೆ. ಮೀಸಲಾತಿ ವಿಧೇಯಕದಲ್ಲಿ 3ಬಿ ಎಂದು ಉಲ್ಲೇಖಿಸುವ ಮೂಲಕ ಅಲ್ಪಸಂಖ್ಯಾತ ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ಖರನ್ನು ಮೀಸಲಾತಿಯಿಂದ ಹೊರಗಿಡಲಾಗಿದೆ. ಕದ್ದುಮುಚ್ಚಿ ಮುಸಲ್ಮಾನರಿಗೆ ಮೀಸಲಾತಿ ನೀಡಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಎಲ್ಲ ಮತ, ಧರ್ಮದ ಜನರನ್ನು ಸಮಾನವಾಗಿ ಕಾಣುತ್ತಿವೆ. ಕೇಂದ್ರ ಸರಕಾರ ತ್ರಿವಳಿ ತಲಾಖ್ ರದ್ದುಪಡಿಸುವ ಮೂಲಕ ಮುಸಲ್ಮಾನ ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಬದುಕು ಕಲ್ಪಿಸಲಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಮುಸ್ಲಿಂ ತುಷ್ಟೀಕರಣದಲ್ಲಿ ತೊಡಗಿದ್ದಾರೆ. 15-20 ವರ್ಷ ಕಳೆದಾಗ ಕಾಂಗ್ರೆಸ್ ಪಕ್ಷವೇ ನಾಶಹೊಂದಲಿದ್ದು, ಕಾಂಗ್ರೆಸ್ ಸ್ಥಾನದಲ್ಲಿ ಮುಸ್ಲಿಂ ಲೀಗ್ ಇರಲಿದೆ ಎಂಬುದನ್ನು ಕಾಂಗ್ರೆಸಿಗರು ಮನಗಾಣಬೇಕು ಎಂದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ರೈತ ಬಜೆಟ್ ಜಾರಿಗೊಳಿಸಿತ್ತು. ಕಾಂಗ್ರೆಸ್ ಸರಕಾರ ಒಂದು ವರ್ಗವನ್ನು ಸಂತೃಪ್ತಿಪಡಿಸಲು ಬಜೆಟ್ ಮಂಡಿಸಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮುಖಂಡರಾದ ರವಿಶಂಕರ ಮಿಜಾರ್, ನಿತಿನ್ ಕುಆರ್.ಸಿ. ನಾರಾಯಣ್, ಸುಲೋಚನಾ ಭಟ್, ಶಿಲ್ಪಾ ಸುವರ್ಣ, ಮಾಜಿ ಮೇಯರ್‌ಗಳಾದ ಸುಧೀರ್ ಶೆಟ್ಟಿ, ಜಯಾನಂದ ಅಂಚನ್, ಮನೋಜ್ ಕುಮಾರ್,  ಭಾಗವಹಿಸಿದ್ದರು.

ಪ್ರತಿಭಟನೆ ಬಳಿಕ ಬಿಜೆಪಿ ಕಾರ್ಯಕರ್ತರು ಕೆಲಕಾಲ ರಸ್ತೆ ತಡೆ ನಡೆಸಿದರು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article