
ಕೈಗಾರಿಕಾ ಸುರಕ್ಷತೆಗೆ ಸೂಕ್ಷ್ಮ ಯೋಜನೆ ರೂಪಿಸಲು ಕ್ರಮ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ಕೈಗಾರಿಕೆಗಳಲ್ಲಿ ಸುರಕ್ಷತೆಗೆ ಸೂಕ್ಷ್ಮ ಯೋಜನೆ ರೂಪಿಸಲು ಕಂಪನಿಗಳು ಕ್ರಮ ಕೈಗೊಳ್ಳಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸುರಕ್ಷಾ ಸಂಸ್ಥೆ, ಕಂಪನಿ, ಬಾಯ್ಲರ್, ಕೈಗಾರಿಕಾ ಸುರಕ್ಷಾ ಮತ್ತು ಆರೋಗ್ಯ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಸುರಕ್ಷಾ ಕೌನ್ಸಿಲ್ ಕರ್ನಾಟಕ ಚಾಪ್ಟರ್‌ನ ಮಂಗಳೂರು ಆಕ್ಷನ್ ಸೆಂಟರ್ ಇಲ್ಲಿನ ಪುರಭವನದಲ್ಲಿ ಗುರುವಾರ ಏರ್ಪಡಿಸಿದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಐಟಿ ಉದ್ಯೋಗದಂತೆ ಪದೇ ಪದೇ ಉದ್ಯೋಗ ಬದಲಾವಣೆಗೆ ಒಳಪಡುವುದಿಲ್ಲ. ಕೈಗಾರಿಕಾ ಕ್ರಾಂತಿ ಬಳಿಕ ದೇಶದಲ್ಲಿ ಉದ್ದಿಮೆಗಳಿಗೆ
ಸಂಬಂಧಿಸಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ಬಂತು. ಕೈಗಾರಿಕೆಗಳು ವ್ಯಕ್ತಿಗತವಾಗಿಯೂ ಕಾರ್ಮಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಕೈಗಾರಿಕಾ ಸುರಕ್ಷತೆ ಎನ್ನುವುದು ಅಂತಾರಾಷ್ಟ್ರೀಯ ಮಾನದಂಡವನ್ನು ಹೊಂದಿರುತ್ತದೆ. ಕೈಗಾರಿಕಾ ಸುರಕ್ಷೆಯಾದರೆ ಸಮಾಜದ ರಕ್ಷೆಯಾಗುತ್ತದೆ. ಕೈಗಾರಿಕಾ ಅವಘಡಗಳು ಸಂಭವಿಸಿದಾಗ ಇತರರಿಗೂ ನೆರವಿನ ಹಸ್ತ ಚಾಚಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಲಯದ ಅಗ್ನಿಶಾಮಕದಳ ಮುಖ್ಯ ಅಧಿಕಾರಿ ತಿರುಮಲೇಶ್, ದೇಶದ ಕೈಗಾರಿಕೆಗಳಲ್ಲಿ 2 ಮಿಲಿಯನ್ ಉದ್ಯೋಗಿಗಳಿದ್ದು, ದೇಶದ ಆದಾಯದಲ್ಲಿ ಶೇ.7ರಷ್ಟು ಕೈಗಾರಿಕೆಗಳಿಂದ ದೊರಕುತ್ತಿದೆ. ಹೀಗಿರುವಾಗ ಕೈಗಾರಿಕೆಗಳಲ್ಲಿ ಹಾಗೂ ಉದ್ಯೋಗಿಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದರು.
ಕೈಗಾರಿಕೆಗಳಲ್ಲಿ ಸುರಕ್ಷತೆಗೆ ಅತ್ಯಾಧುನಿಕ ತಾಂತ್ರಿಕತೆ ಇರಬೇಕು. ಹೆಚ್ಚಿನ ಸುರಕ್ಷತೆಯನ್ನು ಹೊಂದಿದಾಗ ಯಾವುದೇ ಅವಘಡ ಸಂಭವಿಸಲು ಸಾಧ್ಯವಿಲ್ಲ. ಕೇವಲ ತರಬೇತಿ ಮಾತ್ರ ಹೊಂದಿದ್ದರೆ ಸಾಲದು, ಸುರಕ್ಷತೆ ಕಡೆಗೆ ಸಾಕಷ್ಟು ಗಮನ ಇರಬೇಕು ಎಂದರು.
ಕೈಗಾರಿಕಾ ಅವಘಡಗಳ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ ಬಹಮಾನ ವಿತರಿಸಲಾಯಿತು. 2024 ಡಿಸೆಂಬರ್ನಲ್ಲಿ ಉಳ್ಳಾಲದಲ್ಲಿ ಸಂಭವಿಸಿದ ಗ್ಯಾಸ್ ಟ್ಯಾಂಕರ್ ಅವಘಡದಲ್ಲಿ ಗ್ಯಾಸ್ ಸೋರಿಕೆ ಶಮನಕ್ಕೆ ಶ್ರಮಿಸಿದ ವಿವಿಧ ಕೈಗಾರಿಕಾ ಕಂಪನಿಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು.
ಎಂಆರ್‌ಪಿಎಲ್ ರಿಫೈನರಿ ನಿರ್ದೇಶಕ ನಂದಕುಮಾರ್ ವೇಲಾಯುಧನ್ ಪಿಳ್ಳೆ ಶುಭ ಹಾರೈಸಿದರು.
ಕಂಪನಿ, ಬಾಯ್ಲರ್, ಕೈಗಾರಿಕಾ ಸುರಕ್ಷಾ ಇಲಾಖೆ ಮಂಗಳೂರಿನ ಉಪ ನಿರ್ದೇಶಕ ಮಹಾದೇವ್ ಸ್ವಾಗತಿಸಿ, ವಂದಿಸಿದರು. ಗುರುಪ್ರಸಾದ್ ಮತ್ತು ಸೋನಿಕಾ ನಿರೂಪಿಸಿದರು.
ಅಪಾಯಕಾರಿ ಕೈಗಾರಿಕೆ...
ಕಂಪನಿ, ಬಾಯ್ಲರ್, ಕೈಗಾರಿಕಾ ಸುರಕ್ಷಾ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ನರೇಂದ್ರ ಬಾಬು ಮಾತನಾಡಿ, ಕೈಗಾರಿಕಾ ಅವಘಡಗಳ ಕುರಿತು ಅರಿವು ಮೂಡಿಸಲು ಪ್ರತ್ಯೇಕ ಅನುದಾನ ಇರುವುದಿಲ್ಲ. ರಾಜ್ಯದಲ್ಲಿ 19 ಸಾವಿರ ನೋಂದಾಯಿತ ಕೈಗಾರಿಕೆಗಳಿದ್ದು, 1 ಸಾವಿರ ಅಪಾಯಕಾರಿ ಕೈಗಾರಿಕೆಗಳಿವೆ. ಅವುಗಳಲ್ಲಿ 90 ಅತೀ ಅಪಾಯಕಾರಿ ಕೈಗಾರಿಕೆಗಳಾಗಿವೆ. ಈ ಪೈಕಿ ದ.ಕ.ಜಿಲ್ಲೆಯಲ್ಲಿ 15 ಅತೀ ಅಪಾಯಕಾರಿ ಕೈಗಾರಿಕೆ ಇದೆ. ಹೀಗಾಗಿ ಇಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸುರಕ್ಷತಾ ಸಲುವಾಗಿ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಅವಧಿಯಲ್ಲಿ 70 ಕೈಗಾರಿಕಾ ಅವಘಡಗಳು ಸಂಭವಿಸಿದೆ ಎಂದರು.