ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಅಸವಿಂಧಾನಿಕ-ಸಿದ್ದರಾಮಯ್ಯ ಸರ್ಕಾರದ ಸಮಾಜ ಒಡೆಯುವ ನೀತಿ ವಿರುದ್ದ ಬಿಜೆಪಿ ತೀವ್ರ ಹೋರಾಟ: ಸಂಸದ ಕ್ಯಾ. ಚೌಟ

ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಅಸವಿಂಧಾನಿಕ-ಸಿದ್ದರಾಮಯ್ಯ ಸರ್ಕಾರದ ಸಮಾಜ ಒಡೆಯುವ ನೀತಿ ವಿರುದ್ದ ಬಿಜೆಪಿ ತೀವ್ರ ಹೋರಾಟ: ಸಂಸದ ಕ್ಯಾ. ಚೌಟ


ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ.4 ರಷ್ಟು ಮೀಸಲಾತಿ ನೀಡುವ ಮೂಲಕ ಸಮಾಜವನ್ನು ಜಾತಿ-ಮತದ ಆಧಾರದಲ್ಲಿ ವಿಭಜಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿಯು ಸಂಸತ್ತಿನ ಒಳಗೆ ಹಾಗೂ ಹೊರಗೆ ತೀವ್ರ ಹೋರಾಟವನ್ನು ಮಾಡಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.

ನವದೆಹಲಿಯಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜದಲ್ಲಿ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಕೆಲಸವನ್ನು ಮಾಡಿದ್ದರು. ಆದರೆ, ಅಹಿಂದ ಪರ ಎನ್ನುವ ಮುಖವಾಡ ಹಾಕಿಕೊಂಡಿರುವ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಹಿಂದುಳಿದ ಸಮುದಾಯಗಳಿಗೆ ದ್ರೋಹವನ್ನು ಬಗೆಯುವ ಹಾಗೂ ಈ ಮೂಲಕ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯ ಮೇಲಿನ ಋಣ ತೀರಿಸುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ, ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡುವ ಕಾಂಗ್ರೆಸ್ ಸರ್ಕಾರದ ಈ ಧರ್ಮ ವಿರೋಧಿ ಹಾಗೂ ಸಂವಿಧಾನ ವಿರೋಧಿ ನಿರ್ಧಾರವನ್ನು ಬಿಜೆಪಿ ಕಟು ಶಬ್ಧಗಳಿಂದ ಖಂಡಿಸುತ್ತದೆ. ಜತೆಗೆ, ಈ ಅಸಂವಿಧಾನಿಕ ತೀರ್ಮಾವನ್ನು ಹಿಂಪಡೆಯುವವರೆಗೂ ಬಿಜೆಪಿಯು ಹೋರಾಟವನ್ನು ನಡೆಸಲಿದೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ವಿಶೇಷವಾದ ಮೀಸಲಾತಿ ಕೊಟ್ಟು ಸಮಾಜವನ್ನು ಮತಗಳ ಆಧಾರದಲ್ಲಿ ಒಡೆಯುವ ಸಿದ್ದರಾಮಯ್ಯ ಸರ್ಕಾರದ ಈ ಘೋಷಣೆಯನ್ನು ರದ್ದುಗೊಳಿಸುವಂತೆ ಶೀಘ್ರದಲ್ಲೇ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗುತ್ತದೆ. ಆ ಮೂಲಕ ಕಾನೂನಾತ್ಮಕವಾಗಿಯೂ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡಲು ಹೊರಟಿರುವುದನ್ನು ರದ್ದುಪಡಿಸುವುದಕ್ಕೆ ಬಿಜೆಪಿ ಪಕ್ಷ ನಿರ್ಧರಿಸಿದೆ. 

ಬಜೆಟ್‌ನಲ್ಲಿ ಮುಖ್ಯಮಂತ್ರಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ನಿಧಿ ಎನ್ನುವ ಒಂದು ಸಾವಿರ ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನೂ ಸಿದ್ದರಾಮಯ್ಯನವರು ಘೋಷಿಸಿದ್ದಾರೆ. ಅಂಬೇಡ್ಕರ್ ಆಶಯಗಳಿಗೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಮ್ಮ ಸಂವಿಧಾನವನ್ನೇ ಒಡೆಯುವ ಕೆಲಸಕ್ಕೆ ಸಿದ್ದರಾಮಯ್ಯನವರು ಕೈಹಾಕಿದ್ದಾರೆ. ಆ ಮೂಲಕ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯವನ್ನು ‘ಸಾಮಾಜಿಕ ಪ್ರತ್ಯೇಕೀಕರಣ’ ಮಾಡಲು ಹೊರಟಿದ್ದು, ಬಿಜೆಪಿ ಇದನ್ನು ಸ್ಪಷ್ಟ ಶಬ್ಧಗಳಿಂದ ಖಂಡಿಸುತ್ತದೆ ಎಂದರು.

ನಮ್ಮ ದೇಶದಲ್ಲಿ ಮತ-ಧರ್ಮಗಳ ಆಧಾರದ ಮೇಲೆ ಈ ರೀತಿ ಮೀಸಲಾತಿ ನೀಡುವುದಕ್ಕೆ ಎಲ್ಲಿಯೂ ಅವಕಾಶವಿರುವುದಿಲ್ಲ. ಈ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ಹಲವಾರು ಆದೇಶ ಕೂಡ ಇದೆ. ಈ ಹಿಂದೆ ಸಂವಿಧಾನ ರಚಿಸುವಾಗ ಡಾ. ಬಿ.ಆರ್. ಅಂಬೇಡ್ಕರ್ ಕೂಡ ಧರ್ಮ ಆಧರಿಸಿ ಮೀಸಲಾತಿ ನೀಡುವುದನ್ನು ವಿರೋಧಿಸಿದ್ದರು. ಹಲವು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಇದೇ ರೀತಿಯ ಧರ್ಮಾಧಾರಿತ ಮೀಸಲಾತಿ ನೀಡಲು ಹೊರಟಾಗ ಅದು ಕಾನೂನಿನಡಿಯಲ್ಲಿ ತಿರಸ್ಕಾರಗೊಂಡಿವೆ. ಹೀಗಿರುವಾಗ, ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಕೊಟ್ಟು ಓಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿರುವ ಸಿದ್ದರಾಮಯ್ಯ ಸರ್ಕಾರದ ಈ ಅಸಂವಿಧಾನಿಕ ತೀರ್ಮಾನ ಹಿಂದಕ್ಕೆ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸಂಸದ ಕ್ಯಾ. ಚೌಟ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article