ಮಾ.22 ರಂದು ‘ಸ್ವಾಯತ್ತ’ ಫಿಲೋಮಿನಾ ಕಾಲೇಜು ಉದ್ಘಾಟನೆ

ಮಾ.22 ರಂದು ‘ಸ್ವಾಯತ್ತ’ ಫಿಲೋಮಿನಾ ಕಾಲೇಜು ಉದ್ಘಾಟನೆ


ಪುತ್ತೂರು: ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಅಧೀನಕ್ಕೆ ಒಳಪಟ್ಟಿರುವ ಸಂತಫಿಲೋಮಿನಾ ಕಾಲೇಜು ಇದೀಗ ಸ್ವಾಯತ್ತ ಕಾಲೇಜಾಗಿ ಘೋಷಣೆಯಾಗಿದ್ದು, ಇದರ ಉದ್ಘಾಟನಾ ಸಮಾರಂಭ ಮಾ.22ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಸಂಚಾಲಕ ಮಾಯ್ ದೇ ದೇವುಸ್ ಚರ್ಚ್‌ನ ಧರ್ಮಗುರು ಅತೀ ವಂ. ಲಾರೆನ್ಸ್ ಮಸ್ಕರೇನಸ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಅಧೀನದಲ್ಲಿರುವ ಸಂತಫಿಲೋಮಿನಾ ಕಾಲೇಜು ಮೊದಲ ಸ್ವಾಯತ್ತ ಕಾಲೇಜಾಗಿದೆ. ಕಳೆದ 6 ದಶಕಗಳ ಇತಿಹಾಸ ಇರುವ ಈ ಕಾಲೇಜು ಸ್ವಾಯತ್ತ ಸ್ಥಾನಮಾನದಿಂದ ಮತ್ತಷ್ಟು ಕ್ರೀಯಾತ್ಮಕವಾಗಿ ಕಾರ್ಯನಿರ್ವಹಿಸಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಉತ್ಸುಕತೆಯಿಂದ ಕೆಲಸ ಮಾಡಲು ಇದು ಪ್ರೇರಣೆಯಾಗಿದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಂಸಿಎ ಕೋರ್ಸುಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬಿಬಿಎ, ಬಿಸಿಎ ಹಾಗೂ ಬಿಎಸ್ಸಿ ಕೋರ್ಸುಗಳನ್ನು ಆರಂಭಿಸಲಾಗುವುದು ವಿದ್ಯಾರ್ಥಿಗಳಿಗೆ ಹಲವು ಐಚ್ಛಿಕ ವಿಷಯಗಳನ್ನು ನೀಡಿ ಕೌಶಲ್ಯಾಭರಿತ ಕಲಿಕೆಗೆ ಒತ್ತು ನೀಡುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ ಅವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಬೆಂಗಳೂರು ಮಹಾನಗರಪಾಲಿಕೆಯ ಮೆಟ್ರೋಪೊಲಿಟನ್ ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಮಚಾದೋರ್ ನೆರವೇರಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಸ್ಪೀಕರ್ ಯು.ಟಿ. ಖಾದರ್ ಫರೀದ್, ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಂಸದ ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ರೈ, ಎಂಎಲ್‌ಸಿ ಐವನ್ ಡಿಸೋಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಕವಿತಾ ಕೆ.ಆರ್, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್, ಮಂಗಳೂರು ಧರ್ಮಪ್ರಾಂತ್ಯದ ಗುರು ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ, ಕ್ಯಾಥೋಲಿಕ್ ಬೋರ್ಡ್ ಆಫ್ ಎಜ್ಯುಕೇಶನ್ ನ ನಿಕಟಪೂರ್ವ ಕಾರ್ಯದರ್ಶಿ ವಂ.ಆಂಟನಿ ಮೈಕೆಲದ ಶೆರಾ ಅವರು ಭಾಗಿಯಾಲಿದ್ದಾರೆ. 

ಸಂತಫಿಲೋಮಿನಾ ಕಾಲೇಜಿನಲ್ಲಿ ಪ್ರಸ್ತುತ ಪದವಿ ವಿಭಾಗದಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಹಾಗೂ ಬಿಸಿಎ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಎಂಎಸ್‌ಡಬ್ಲ್ಯೂ, ಎಂಕಾಂ, ಭೌತಶಾಸ್ತ್ರ ಮತ್ತು ಗಣಿತದಲ್ಲಿ ಎಂಎಸ್ಸಿ ಕೋರ್ಸುಗಳನ್ನು ನೀಡಲಾಗುತ್ತಿದೆ. ಸ್ವಾಯತ್ತ ಕಾಲೇಜಿನ ಸ್ಥಾನಮಾನದ ಮೂಲಕ ಮತ್ತಷ್ಟು ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಅನುಕೂಲವಾಗಲಿದೆ. ಪಠ್ಯಕ್ರಮಗಳನ್ನು ಮತ್ತಷ್ಟು ಕ್ರೀಯಾತ್ಮಕವಾಗಿ ರೂಪುಗೊಳಿಸಲು ಸಾಧ್ಯವಾಗಲಿದೆ ಎಂದವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ, ಉಪಪ್ರಾಂಶುಪಾಲ ಡಾ.ವಿಜಯಕುಮಾರ ಮೊಳೆಯಾರ,  ರೆಜಿಷ್ಟಾರ್ ಅಕಾಡೆಮಿಕ್ ಡಾ.ನೋರ್ಬರ್ಟ್ ಮಸ್ಕರೇನಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತ, ಪರೀಕ್ಷಾಂಗ ಕುಲಸಚಿವ ಡಾ.ವಿನಯಚಂದ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್ ರೈ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article