
ಮೀನು ಕದ್ದ ಆರೋಪ: ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಹಲ್ಲೆ
ಉಡುಪಿ: ಮೀನು ಕದ್ದ ಆರೋಪದಡಿ ವಿಜಯಪುರ ಜಿಲ್ಲೆಯ ಲಮಾಣಿ ಜನಾಂಗಕ್ಕೆ ಸೇರಿದ ಪರಿಶಿಷ್ಟ ಜಾತಿಯ ಮಹಿಳೆಯೋರ್ವರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ನಡೆದಿದ್ದು, ಆ ವೀಡಿಯೊ ವೈರಲ್ ಆಗಿದೆ.
ಬುದ್ದಿವಂತರ ಜಿಲ್ಲೆ ಎಂದೆನಿಸಿದ ಉಡುಪಿಯಲ್ಲಿ ನಡೆದ ಈ ಅಮಾನವೀಯ ಘಟನೆಯನ್ನು ತಡೆಯುವ ಬದಲು, ನೆರೆದ ಅಷ್ಟೂ ಮಂದಿ ವೀಡಿಯೊ ಚಿತ್ರೀಕರಣ ಹಾಗೂ ವಿಕೃತ ಸಂತಸ ವ್ಯಕ್ತಪಡಿಸುತ್ತಿರುವುದು ಜನತೆಯ ಮನಃಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಘಟನೆಗೆ ಸರ್ವತ್ರ ಖಂಡನೆ ವ್ಯಕ್ತವಾಗಿದೆ.
ಮಾ.18ರಂದು ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಮಲ್ಪೆ ಪೊಲೀಸರು, ಹಲ್ಲೆಗೊಳಗಾದ ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಮಹಿಳೆ ಬಂದರಿನಲ್ಲಿ ಮೀನು ಕದ್ದಿದ್ದಾರೆ ಎಂದು ಆರೋಪಿಸಿ ಸ್ಥಳೀಯರಾದ ಲಕ್ಷ್ಮೀಬಾಯಿ ಹಲ್ಲೆ ಮಾಡಿದ್ದು, ನಂತರ ಸ್ಥಳೀಯರು ಸೇರಿ ಆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಲಕ್ಷ್ಮೀಬಾಯಿ, ಸುಂದರ, ಶಿಲ್ಪಾ ಹಾಗೂ ಇನ್ನೋರ್ವನನ್ನು ಗುರುತಿಸಲಾಗಿದೆ. ಇನ್ನುಳಿದವರ ಪಾತ್ರದ ಬಗ್ಗೆ ವಿಡಿಯೋ ಮೂಲಕ ಪರಿಶೀಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದವರು ತಿಳಿಸಿದ್ದಾರೆ.