
ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ತೇಜೋವಧೆ: ಮಾ.27 ರಂದು ಪ್ರತಿಭಟನಾ ಸಭೆ
Wednesday, March 26, 2025
ಉಜಿರೆ: ಕಳೆದ ಕೆಲವು ದಿನಗಳಿಂದ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಯೆ ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಅವಹೇಳನಕಾರಿಯಾದ ಆಧಾರರಹಿತ ಮಾಹಿತಿಗಳು ಹರಿದಾಡುತ್ತಿವೆ. ಸೌಜನ್ಯಾ ಕೊಲೆ ಪ್ರಕರಣಕ್ಕೂ ಧರ್ಮಸ್ಥಳಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ವಿನಾ ಕಾರಣ ಪೂರ್ವಾಗ್ರಹ ಪೀಡಿತರಾಗಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ಸೌಜನ್ಯಾ ಪ್ರಕರಣದ ನೆಪದಲ್ಲಿ ಧರ್ಮಸ್ಥಳದ ತೇಜೋವಧೆ ಮಾಡುವುದನ್ನು ಖಂಡಿಸಿ ಮಾ.27ರಂದು ಹತ್ತು ಗಂಟೆಯಿಂದ ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿ ತೇಜೋವಧೆ ಮಾಡುತ್ತಿರುವವರ ಬಗ್ಯೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುವುದು ಎಂದು ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೇಶವ ಗೌಡ ತಿಳಿಸಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗುರುವಾರ ಬೆಳಿಗ್ಗೆ 9 ಗಂಟೆಗೆ ಧರ್ಮಸ್ಥಳದಲ್ಲಿ ಅಣ್ಣಪ್ಪಸ್ವಾಮಿ ಬೆಟ್ಟದ ಬಳಿ ಗ್ರಾಮಸ್ಥರೆಲ್ಲ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಬಳಿಕ ಪಾದಯಾತ್ರೆ ಮೂಲಕ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ಮೈದಾನಕ್ಕೆ ಹೋಗಿ ಪ್ರತಿಭಟನಾ ಸಭೆ ನಡೆಸಲಾಗುವುದು.
ಧರ್ಮಸ್ಥಳದ ಗ್ರಾಮಸ್ಥರು, ಭಕ್ತರು ಹಾಗೂ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲಾ, ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರೀತಂ, ಉಪಾಧ್ಯಕ್ಷ ಅಜಿತ್ ಜೈನ್, ವರ್ತಕರ ಸಂಘದ ಪ್ರತಿನಿಧಿ ಭವಾನಿಶಂಕರ್, ವಾಹನ ಮಾಲಕರು-ಚಾಲಕರ ಪ್ರತಿನಿಧಿ ನೀಲಕಂಠ ಶೆಟ್ಟಿ, ಅಖಿಲೇಶ್, ಶೃತಾಂಜನ ಜೈನ್, ಧನಕೀರ್ತಿ ಆರಿಗಾ, ಶ್ರೀನಿವಾಸ ರಾವ್ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು.