
ಬೀಡಿ ಕಾರ್ಮಿಕರ ಕೂಲಿಯನ್ನು ಕೊಡಿಸಲು ಆಗ್ರಹ
Wednesday, April 9, 2025
ಬಂಟ್ವಾಳ: ಬೀಡಿ ಕಾರ್ಮಿಕರಿಗೆ ಕಾನೂನು ಬದ್ದವಾಗಿ ಪ್ರತಿ 1000 ಬೀಡಿಗೆ ಸಿಗಬೇಕಿದ್ದ 331 ರೂ. ಕೂಲಿಯನ್ನು ಸಾವಿರ ಬೀಡಿಗೆ 270 ರೂ.ವಿಗೆ ಹಿಮ್ಮುಖವಾಗಿ ನಿಗದಿಗೊಳಿಸಿ ಹೊಸ ಆದೇಶ ಹೊರಡಿಸಿರುವ ರಾಜ್ಯ ಸರಕಾರದ ಕಾರ್ಮಿಕ ವಿರೋದಿ ಆದೇಶವನ್ನು ಸಿಐಟಿಯು ವಿರೋದಿಸುತ್ತದೆ ಎಂದು ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಫೆಢರೇಶನ್ ನ ಉಪಾಧ್ಯಕ್ಷರಾದ ಬಿ.ಎಂ.ಭಟ್ ಹೇಳಿದ್ದಾರೆ.
ಬೀಡಿ ಕಾರ್ಮಿಕರ ವೇತನ ಕಡಿತ ಮತ್ತು ವೇತನ ಬಾಕಿಯನ್ನು ಕೊಡಿಸದ ಸರಕಾರದ ಕಾರ್ಮಿಕ ವಿರೋಧಿ ದೋರಣೆಯ ವಿರುದ್ದ ಬಂಟ್ವಾಳ ತಾಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಕಾವಳ ಪಡೂರು ಗ್ರಾಮ ಪಂಚಾಯತು ಎದುರು ನಡೆದ ಬೀಡಿ ಕಾರ್ಮಿಕರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, 2025 ಏ.1 ರಿಂದ 31 ತನಕ ಇರಬೇಕಾಗಿದ್ದ ಕೂಲಿಯನ್ನೂ ಕೂಡಾ ಕಡಿತ ಗೊಳಿಸಿದ ರಾಜ್ಯದ ಕಾಂಗ್ರೇಸ್ ಸರಕಾರದ ಆದೇಶ ಸಂಪೂರ್ಣ ಕಾರ್ಮಿಕ ವಿರೋಧಿಯಾಗಿದೆ ಎಂದು ಟೀಕಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕೆ. ಯಾಧವ ಶೆಟ್ಟಿ, ಸಿಐಟಿಯು ಜಿಲ್ಲಾ ಮುಖಂಡರಾದ ಈಶ್ವರಿ ಪದ್ಮುಂಜ ಅವರು ಮಾತನಾಡಿದರು. ಬಂಟ್ವಾಳ ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರಾದ ಚಂದ್ರ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಲೋಲಾಕ್ಷಿ ವಂದಿಸಿದರು.
ಬೀಡಿ ಗುತ್ತಿಗೆದಾರರಾದ ಇಬ್ರಾಹಿಂ ಖಲೀಲ್, ರಹಮತ್ ಆಲಿ, ಸಮಾಜ ಸೇವಕಗೋಪಾಲ ಟೈಲರ್ ಉಪಸ್ಥಿತರಿದ್ದರು. ಬಳಿಕ ಪಂಚಾಯತು ಅಧ್ಯಕ್ಷರು, ಕಾರ್ಯದರ್ಶಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.