
ವಿಶೇಷ ಮಕ್ಕಳ ಸೇವೆ ದೇವರು ಮೆಚ್ಚುವ ಕಾರ್ಯ: ಯು.ಟಿ. ಖಾದರ್
ಸುಳ್ಯ:ವಿಶೇಷ ಮಕ್ಕಳ ಸೇವೆ, ಅವರಿಗೆ ಶಿಕ್ಷಣ ನೀಡಿ ಅವರ ಪ್ರತಿಭೆಗಳನ್ನು ಪೋಷಿಸುವ ಕೆಲಸ ದೇವರು ಮೆಚ್ಚುವ ಕೆಲಸ. ಆ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ರಾಜ್ಯ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಹೇಳಿದ್ದಾರೆ.
ಸುಳ್ಯದ ಎಂ.ಬಿ.ಫೌಂಡೇಶನ್ ವತಿಯಿಂದ ಸಾಂದೀಪ್ ವಿಶೇಷ ಶಾಲೆಯ ಸಭಾಂಗಣದಲ್ಲಿ ನಡೆದ ಉತ್ತಮ ಶಿಕ್ಷಕರಿಗೆ ಕೊಡಮಾಡುವ ಎಂ. ಬಿ.ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಹೃದಯದಲ್ಲಿ
ಮಾನವೀಯತೆ, ಸಹಾನುಭೂತಿ, ಕರುಣೆ,ಮಮತೆ ಇದ್ದರೆ ಮಾತ್ರ ಈ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯ, ಈ ಶ್ರಮಕ್ಕೆ ಫಲ ಸಿಕ್ಕಿಯೇ ಸಿಗುತ್ತದೆ. ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಲು ಪೋಷಕರು, ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ನಡೆಸುವ ಕೆಲಸ ಶ್ಲಾಘನೀಯ ಎಂದ ಅವರು ಈ ಸಂಸ್ಥೆಗೆ ಮತ್ತು ಕೆಲಸಕ್ಕೆ ಎಲ್ಲರ ಸಹಾಯ ಸಹಕಾರ ಬೇಕು. ಈ ರೀತಿಯ ಸೇವೆಯ ಮೂಲಕ ಸಮಾಜಕ್ಕೆ ನೀಡುವ ಕೊಡುಗೆ ನಿಜವಾದ ದೇಶ ಸೇವೆ ಎಂದು ಅವರು ಬಣ್ಣಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ವಿಶೇಷ ಶಾಲೆಯನ್ನು ನಡೆಸುವುದು ಅಸಾಮಾನ್ಯ ಕೆಲಸ. ವಿಶೇಷ ಚೇತನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆಳೆಸುವುದು ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.
ಕೊಲ್ಚಾರು ಸ.ಹಿ.ಪ್ರಾ ಶಾಲೆ ಶಿಕ್ಷಕಿ ಜಲಜಾಕ್ಷಿ ಹಾಗೂ ಸಂತ ಬ್ರಿಜಿಡ್ಸ್ ಸ.ಹಿ.ಪ್ರಾ ಶಾಲೆ ಶಿಕ್ಷಕಿ ವಲ್ಸ ಅವರಿಗೆ ಎಂ ಬಿ ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಮಾಜಿಕ ಮುಖಂಡ ಲತೀಫ್ ಹರ್ಲಡ್ಕ, ನಾಟ್ಯಪ್ರವೀಣೆ ಮಂಜುಶ್ರೀ ರಾಘವ, ಪ್ರತಿಭಾವಂತ ವಿದ್ಯಾರ್ಥಿನಿ ಯಶ್ವಿನಿ ಪಿ. ಭಟ್, ನಿವೃತ್ತ ದೈಹಿಕ ಶಿಕ್ಷಕ ನಟರಾಜ್ ಎಂ.ಎಸ್. ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ನ.ಪಂ.ಸದಸ್ಯೆ ಕಿಶೋರಿ ಶೇಟ್, ತಹಶೀಲ್ದಾರ್ ಮಂಜುಳಾ ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ದಿನೇಶ್, ಸೈಂಟ್ ಜೋಸೆಫ್ ಶಾಲೆಯ ಸಂಚಾಲಕರಾದ ಫಾ.ವಿಕ್ಟರ್ ಡಿಸೋಜ, ಇಂದಿರಾ ದೇವಿಪ್ರಸಾದ್, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಅತಿಥಿಗಳಾಗಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶೀತಲ್ ಯು.ಕೆ. ಹಾಗೂ ಶಿಕ್ಷಕಿ ಮಮತಾ ಎಸ್.ಕೆ. ಅಭಿನಂದನಾ ಭಾಷಣ ಮಾಡಿದರು. ಎಂ.ಬಿ.ಫೌಂಡೇಷನ್ ಅಧ್ಯಕ್ಷ ಎಂ.ಬಿ.ಸದಾಶಿವ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿದರು. ಸಾಂದೀಪ್ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ ಶಾಲಾ ವರದಿ ವಾಚಿಸಿದರು. ಎಂ.ಬಿ.ಫೌಂಡೇಶನ್ನ ಕಾರ್ಯದರ್ಶಿ ಡಾ.ಸವಿತಾ ಲಕ್ಷ್ಮಿ, ಕೋಶಾಧಿಕಾರಿ ಪುಷ್ಪಾ ರಾಧಾಕೃಷ್ಣ, ಟ್ರಸ್ಟಿಗಳಾದ ಸೂರಯ್ಯ ಎಸ್.ಆರ್, ನೇತ್ರಾವತಿ ಪಡ್ಡಂಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕಿ ಮಮತಾ ಕೆ ಹಾಗೂ ಶಿಕ್ಷಕಿ ಮಮತಾ ಎಸ್.ಕೆ.ಕಾರ್ಯಕ್ರಮ ನಿರೂಪಿಸಿದರು.