ಪಂಬ ಸನ್ನಿಧಿಯಲ್ಲಿ ಬಂಟ್ವಾಳದ ಶಿಕ್ಷಕರೋರ್ವರು ಕುಸಿದು ಬಿದ್ದು ಮೃತ್ಯು

ಪಂಬ ಸನ್ನಿಧಿಯಲ್ಲಿ ಬಂಟ್ವಾಳದ ಶಿಕ್ಷಕರೋರ್ವರು ಕುಸಿದು ಬಿದ್ದು ಮೃತ್ಯು


ಬಂಟ್ವಾಳ: ಅಯ್ಯಪ್ಪ ವೃತಧಾರಿಯಾಗಿ ಶಬರಿಮಲೆ ಯಾತ್ರೆಗೆಂದು ತನ್ನ ಸ್ನೇಹಿತರ ಜತೆ ತೆರಳಿದ್ದ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಪಂಬ ಸನ್ನಿಧಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಬಂಟ್ವಾಳ ತಾಲೂಕಿನ ಕೆದಿಲ ಪಾಟ್ರಕೋಡಿ ಸರಕಾರಿ ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ ಉಮರಗಿ ಶರಣಪ್ಪ (57) ಮೃತಪಟ್ಟವರಾಗಿದ್ದಾರೆ.

ಬಂಟ್ವಾಳ ತಾಲೂಕಿನ ವಿವಿದೆಡೆಯ ಸುಮಾರು ೨೪ ಮಂದಿ ಮಂಗಳವಾರ ಮಧ್ಯಾಹ್ನದ ರೈಲಿನಲ್ಲಿ ಶಬರಿಮಲೆ ಯಾತ್ರೆಗೆ ತೆರಳಿದ್ದು, ಬುಧವಾರ ಮುಂಜಾನೆ ದೇವರ ದರ್ಶನಕ್ಕೆ ತೆರಳಲು ಹೋಗುತ್ತಿದ್ದಾಗ ಪಂಬ ಸನ್ನಿಧಿಯಲ್ಲಿ ಅವರು ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರ ಜೊತೆಗಿದ್ದವರು ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಯೊಂದಕ್ಕೆ ಅಂಬ್ಯುಲೆನ್ಸ್ ಮೂಲಕ ಸಾಗಿಸಿ ದಾಖಲಿಸಿದರಾದರೂ ಹೃದಯಸ್ತಂಭನಕ್ಕೊಳಗಾಗಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

ಮೃತರು ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ಬಿ.ಸಿ. ರೋಡ್ ಇದರ ಉಪಾಧ್ಯಕ್ಷರು, ಟೀಚರ್ಸ್ ಕೋ ಅಪರೇಟಿವ್ ಸಹಕಾರಿಯ ಮಾಜಿ ನಿರ್ದೇಶಕರು ಆಗಿದ್ದರು.ಇವರು ಮೂಲತಃ ಮಹಾರಾಷ್ಟ್ರದ ಸೋಲಾಪುರ ನಿವಾಸಿಯಾಗಿದ್ದು, ಕಳೆದ 28 ವರ್ಷಗಳಿಂದ ಬಂಟ್ವಾಳ ತಾ.ನ ನರಿಕೊಂಬು ವಿನಲ್ಲಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ ತನ್ನದೇ ಆದ ಸ್ನೇಹಿತರ ಬಳಗವನ್ನು ಅವರು ಹೊಂದಿದ್ದು, ಪ್ರಥಮವಾಗಿ ನರಿಕೊಂಬು ಶಾಲೆಗೆ ಶಿಕ್ಷಕರಾಗಿ ಸೇರಿದ್ದ ಅವರು ನಂತರ ಕುಂಜೂರು ಪಂಜ, ನರಿಕೊಂಬು, ಬೋಳಂತೂರು ಪ್ರಸ್ತುತ ಪಾಟ್ರಕೋಡಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಅಳಿಯ, ಸೊಸೆ, ಮೊಮ್ಮಗನನ್ನು ಅಗಲಿದ್ದಾರೆ.

ಮೃತರ ಪುತ್ರಿ ಮೇರಮಜಲಿನಲ್ಲಿ ಪ್ರಾ.ಆ. ಕೇಂದ್ರದಲ್ಲಿ ಎಎಚ್‌ಒ ಆಗಿದ್ದು, ಸದ್ಯ ಇವರು ಮೇರಮಜಲಿನಲ್ಲಿ ಪುತ್ರಿ ಮನೆಯಲ್ಲಿದ್ದರು.

ಇವರ ಪಾರ್ಥಿವ ಶರೀರವನ್ನು ಶಬರಿಮಲೆಯ ಆಸ್ಪತ್ರೆಯಿಂದ ಬಂಟ್ವಾಳ ಶಿಕ್ಷಣಾಧಿಕಾರಿ ಕಚೇರಿಗೆ ತರಲಾಗುತ್ತಿದ್ದು, ಅಲ್ಲಿ ಇಲಾಖಾಧಿಕಾರಿಗಳು ಅಂತಿಮದರ್ಶನ ಪಡೆದು ಬಳಿಕ ಪಾಟ್ರಕೋಡಿ ಶಾಲೆಗೂ ತಂದು ಅಲ್ಲಿನ ಸಾರ್ವಜನಿಕರು, ಶಿಕ್ಷಕರು, ಸಿಬ್ಬಂದಿಗಳು ಮತ್ತು ಮಕ್ಕಳಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಿ ತದನಂತರ ಅವರ ಹುಟ್ಟೂರು ಸೋಲಾಪುರಕ್ಕೆ ಒಯ್ಯಲಾಗುತ್ತದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಉಮರಗಿ ಶರಣಪ್ಪಅವರ ನಿಧನಕ್ಕೆ ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ಬಿ.ಸಿ. ರೋಡ್ ಇದರ ಅಧ್ಯಕ್ಷ ರಾಜಾ ಬಂಟ್ವಾಳ ಹಾಗೂ ಸಂಘದ ನಿರ್ದೇಶಕರು, ಸಿಬ್ಬಂದಿವರ್ಗ ಶೋಕ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article