ಬಿಜೆಪಿ ಕಾರ್ಯಕರ್ತನನ್ನು ಕೊಂದ ಆರೋಪಿಗೆ ಮುತ್ತು: ಮಂಗಳೂರಿಗೆ ಸಿದ್ದು ಬಂದರೆ ಜನತೆ ಮುತ್ತಿಡುತ್ತಾರೆ!

ಬಿಜೆಪಿ ಕಾರ್ಯಕರ್ತನನ್ನು ಕೊಂದ ಆರೋಪಿಗೆ ಮುತ್ತು: ಮಂಗಳೂರಿಗೆ ಸಿದ್ದು ಬಂದರೆ ಜನತೆ ಮುತ್ತಿಡುತ್ತಾರೆ!


ಮಂಗಳೂರು: ಬಿಜೆಪಿ ಕಾರ್ಯಕರ್ತನನ್ನು ಕೊಂದ ಆರೋಪಿಗೆ ಕೋರ್ಟ್‌ಗೆ ಕರೆತಂದಾಗ ಮುತ್ತಿಡುತ್ತಾರೆ. ಸಿದ್ದರಾಮಯ್ಯ ನೀವು ಕೂಡ ಮಂಗಳೂರಿಗೆ ಬನ್ನಿ, ನಿಮಗೂ ಮುತ್ತಿಡುತ್ತಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಣಕಿಸಿದರು.

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಮತ್ತು ಮುಸ್ಲಿಂ ಓಲೈಕೆ ವಿರೋಧಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡ ಪ್ರಥಮ ಹಂತದ ಜನಾಕ್ರೋಶ ಯಾತ್ರೆ ಅಂಗವಾಗಿ  ಮಂಗಳೂರಿನಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.


ಐದು ಗ್ಯಾರಂಟಿಗಳಲ್ಲಿ ಐದು ವರ್ಷ ಕಳೆಯಲು ಆಟ ಆಡುತ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಕಾಪಾಡಲು ಇಲ್ಲಿನ ಹಣ ಹೋಗಬೇಕು. ಮುಸ್ಲಿಮರಿಗೆ ಗುತ್ತಿಗೆಯಲ್ಲಿ  ಮೀಸಲಾತಿ ಕೊಡಲು ಸಂವಿಧಾನ ಬದಲಾಯಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಇದೇ ಕಾಂಗ್ರೆಸಿಗರು ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ ಎಂದು  ಬಿಜೆಪಿ ಮೇಲೆ ಅನವಶ್ಯಕ ಗೂಬೆ ಕೂರಿಸುತ್ತಿದ್ದಾರೆ. ಇವತ್ತು ಕಾಂಗ್ರೆಸ್ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿದೆ. ಹಾಗಾಗಿ ನಾವು ಇವತ್ತು ಜನರ ಬಳಿ ಹೋಗಬೇಕು.  ಕಾಂಗ್ರೆಸ್ ಅಟ್ಟಹಾಸ ನಿಲ್ಲಿಸೋವರೆಗೆ ನಾವು ವಿರಮಿಸಬಾರದು ಎಂದರು.

ನಮ್ಮ ಜೀವಕ್ಕೆ ಭದ್ರತೆ ಇಲ್ಲ:

ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ನಮ್ಮ ಜೀವಕ್ಕೆ ಭದ್ರತೆ, ಗ್ಯಾರಂಟಿ ಇಲ್ಲದ ಪರಿಸ್ಥಿತಿ ಕರ್ನಾಟಕದಲ್ಲಿ ಇದೆ. ಜಿಹಾದಿಗಳು ಎದ್ದು ನಿಂತು ಹಿಂದೂಗಳನ್ನು ಹತ್ಯೆ ಮಾಡುವ ಕೆಲಸ ನಡೆಯುತ್ತಿದೆ. ನಮ್ಮ ಯಾವುದೇ ಕಾರ್ಯಕರ್ತರು ಹೆದರಬೇಡಿ, ನಾವಿದ್ದೇವೆ. ಹಿಂದೂ ಕಾರ್ಯಕರ್ತರ ಮೇಲೆ ಒತ್ತಡ ತಂದು ಆತ್ಮಹತ್ಯೆ  ಮಾಡಿಕೊಳ್ಳವಂತೆ ಮಾಡುತ್ತಿದ್ದಾರೆ.

ಹೀಗಾಗಿ ಇದೆಲ್ಲಕ್ಕೂ ನಾವು ಉತ್ತರ ಕೊಡಬೇಕಿದೆ, ನಾವು ಸುಮ್ಮನೆ ಇರಬಾರದು. ನಮ್ಮ ಸರ್ಕಾರ ಬಂದರೆ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್  ತೆಗೀತೇವೆ ಎಂದಿದ್ದೆವು. ಆದರೆ ಅದು ನಮ್ಮಿಂದ ಆಗಿಲ್ಲ, ಆದರೆ ಕಾಂಗ್ರೆಸ್ ಸರ್ಕಾರ ಅವರಿಗೆ ಬೇಕಾದವರ ಕೇಸ್ ವಾಪಸ್ ಪಡೆದಿದೆ ಎಂದರು.

ಗ್ರಾಮ ಗ್ರಾಮಗಳಲ್ಲಿ ಹೋರಾಟ: 

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಏನೇನು ಅಭಿವೃದ್ಧಿ ಆಗಿಲ್ಲ. ಈ ಹಿ ಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ, ಶಾದಿಭಾಗ್ಯ ನೀಡಿತ್ತು. ಈ ಎರಡು ವರ್ಷದಲ್ಲಿ ಬಿಟ್ಟಿ ಭಾಗ್ಯ, ಮುಸ್ಲಿಮರಿಗೆ ಶೇ.೪ರ ಮೀಸಲಾತಿ  ಬಿಟ್ಟರೆ ಹಿಂದುಗಳನ್ನು ಅವಹೇಳನ ಮಾಡುವ, ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ನಡೆಯುತ್ತಿದೆ. ಮುಂದಿನ ಮೂರು ವರ್ಷದ ಬಳಿಕ ಬಿಜೆಪಿ ಮತ್ತೆ ಅಧಿಕಾರಕ್ಕೆ  ಬರುತ್ತದೆ. ರಾಜ್ಯ ಸರ್ಕಾರದ ವಿರುದ್ಧ ಜನತೆ ಗ್ರಾಮ ಗ್ರಾಮಗಳಲ್ಲಿ ಹೋರಾಟ ನಡೆಸಲಿದ್ದಾರೆ ಎಂದರು.

ಸಿದ್ದು ಸರ್ಕಾರ ವಿರುದ್ಧ ಹೋರಾಟ:

ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಈ ಹೋರಾಟ ಆರಂಭ ಮಾತ್ರ, ದಪ್ಪ ಚರ್ಮದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾನಮರ್ಯಾದೆ  ಕಳೆದುಕೊಂಡಿದೆ. ಸೋತ ಅಭ್ಯರ್ಥಿಗಳು ಕೂಡ ತಮ್ಮ ಲೆಟರ್‌ಹೆಡ್ ಬಳಸಿ ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತಿದ್ದಾರೆ. ಗ್ರಾಮ, ಬೂತ್‌ಗಳಲ್ಲಿ ಹೋರಾಟ  ನಡೆಯಬೇಕಿದ್ದು, ಸಿದ್ದು ಸರ್ಕಾರ ತೊಲಗಿಸುವ ವರೆಗೆ ಹೋರಾಟ ನಿಲ್ಲಬಾರದು ಎಂದರು.

ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಭಾಗೀರಥಿ, ಸಿಮೆಂಟ್ ಮಂಜು, ಕಿಶೋರ್ ಕುಮಾರ್, ವಿಧಾನ ಪರಿಷತ್ ಮುಖ್ಯ ಸಚೇತಕ ರವಿ ಕುಮಾರ್, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕರಾದ ಯೋಗೀಶ್ ಭಟ್, ಅಂಗಾರ, ಸಂಜೀವ  ಮಠಂದೂರು, ಪ್ರೀತಂ ಗೌಡ, ಮೋನಪ್ಪ ಭಂಡಾರಿ, ಜಿಲ್ಲಾ ಪ್ರಭಾರಿ ಉದಯ ಕುಮಾರ್, ಮುಖಂಡರಾದ ರಾಜೇಶ್ ಕಾವೇರಿ, ದಿವಾಕರ್, ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ ಮತ್ತಿತರರಿದ್ದರು.

ತಿಲಕ್‌ರಾಜ್ ಕೃಷ್ಣಾಪುರ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article