
ವಿದ್ಯಾರ್ಥಿಗಳ ಬದುಕಲ್ಲಿ ‘ಸಂವಹನ’ ಅತೀ ಅಗತ್ಯ: ಡಾ. ಪ್ರಕಾಶ್ ಮೊಂತೆರೊ
Wednesday, April 2, 2025
ಪುತ್ತೂರು: ವಿದ್ಯಾರ್ಥಿಗಳ ಬದುಕಿನಲ್ಲಿ ತಮ್ಮ ಆಲೋಚನೆಗಳನ್ನು ಆತ್ಮವಿಶ್ವಾಸದಿಂದ ಪ್ರಸ್ತುತ ಪಡಿಸುವ ಹಾಗೂ ಸಮರ್ಥನೆ ಮಾಡಿಕೊಳ್ಳಲು ಸಂವಹನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕಾರ್ಪೋರೇಟ್ ವಲಯದಲ್ಲಿ ನಾವು ಯಶಸ್ವಿಯಾಗಬೇಕಾದರೆ ಪರಿಣಾಮಕಾರಿ ಸಂವಹನ, ವಿಮರ್ಶಾತ್ಮಕ ಚಿಂತನೆ ಹಾಗೂ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುವ ಸಾಮರ್ಥ್ಯ ಪ್ರಮುಖವಾದ ಅಂಶವಾಗಿದೆ ಎಂದು ಸಂತಫಿಲೋಮಿನಾ ಸ್ವಾಯತ್ತ ಕಾಲೇಜು ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಹೇಳಿದರು.
ಅವರು ಸಂತಫಿಲೋಮಿನಾ ಸ್ವಾಯತ್ತ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ನಡೆದ ಉದ್ಯಮಶೀಲತೆ ಮತ್ತು ನಾವೀನ್ಯತೆ ಅನುಭವಾತ್ಮಕ ಸಮೂಹ ಚರ್ಚೆ’ ಪ್ರಾಯೋಗಿಕ ತರಬೇತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುಂಪುಚರ್ಚೆ ಎಂಬುವುದು ವೃತ್ತಿಪರ ಕ್ಷೇತ್ರದಲ್ಲಿ ಅರ್ಥಪೂರ್ಣ ಕೌಶಲ್ಯವಾಗಿದೆ ಎಂದು ಹೇಳಿದ ಅವರು ಕಳೆದ 2 ವರ್ಷಗಳಿಂದ ನಾವು ಕಂಪೆನಿ ಸೆಕ್ರಟರಿ ಕೋರ್ಸಿಗೆ ಸೇರ್ಪಡೆಗೊಳ್ಳಲು ತರಬೇತಿ ನೀಡಲಾಗುತ್ತಿತ್ತು. ಮುಂದಿನ ಶೈಕ್ಷಣಿಕ ವರ್ಷದಿಂದ ಬಿಬಿಎ ಇನ್ ಬ್ಯುಸಿನೆಸ್ ಅನಾಲಿಟಿಕ್ಸ್ ಕಾರ್ಯಕ್ರಮವನ್ನೂ ಪರಿಚಯಿಸುತ್ತಿದ್ದೇವೆ ಎಂದರು.
ವೇದಿಕೆಯಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ, ನಿರ್ವಹಣಾ ಸಂಘದ ಸಂಚಾಲಕಿ ಪುಷ್ಪ ಎನ್. ಉಪಸ್ಥಿತರಿದ್ದರು. ಬಿಬಿಎ ವಿಭಾಗದ ಉಪನ್ಯಾಸಕಾರ ಪ್ರಶಾಂತ್ ರೈ, ಅಭಿಷೇಕ್ ಸುವರ್ಣ ಭಾಗಿಯಾಗಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೃಷ್ಣಮೋಹನ್ ಅವರು ಪದವಿ ಶಿಕ್ಷಣದ ಬಳಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳು ಹಾಗೂ ಉದ್ಯೋಗವಕಾಶಗಳ ಬಗ್ಗೆ ಜ್ಞಾನ ಸಂಪಾದಿಸಲು ಇರುವ ಮೂಲಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಅಂತಿಮ ಬಿಬಿಎ ವಿದ್ಯಾರ್ಥಿ ಮನೋಜ್ ಎನ್. ಸ್ವಾಗತಿಸಿದರು. ಪ್ರಥಮ ಬಿಬಿಎ ವಿದ್ಯಾರ್ಥಿ ಲಿಖಿತ್ ವಂದಿಸಿದರು. ತೃತೀಯ ಬಿಬಿಎಯ ಮಹಿಮಾ ಮತ್ತು ತಂಡ ಪ್ರಾರ್ಥಿಸಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಅನಘ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು.