
ಕೋಟೆಪುರ ಫಿಶ್ಮೀಲ್ ವಿಚಾರದಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ: ಬಿ.ಕೆ. ಇಮ್ತಿಯಾಝ್
Wednesday, April 16, 2025
ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ಕೋಟೆಪುರದಲ್ಲಿ ಕಾರ್ಯಚರಿಸುವ ಫಿಶ್ಮೀಲ್ ಕಂಪೆನಿಗಳು ಜನರ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಮಾರಕವಾಗಿರುವ ಕಲ್ಲಿದ್ದಲನ್ನು ಬಳಕೆ ಮಾಡಿ ಮೀನು ಸಂಸ್ಕರಣೆ ಮಾಡುತ್ತಿರುವುದರ ವಿರುದ್ದವಾಗಿ ಡಿವೈಎಫ್‌ಐ ಕೋಡಿ-ಕೋಟೆಪುರ ಘಟಕ ವತಿಯಿಂದ ಕೋಟೆಪುರ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಕೋಟೆಪುರದಲ್ಲಿರುವ ಫಿಶ್ಮೀಲ್ ಕಂಪೆನಿಗಳು ಹೊರಸೂಸುವ ಹಾರುಬೂದಿಗಳು ಜನರು ಊಟ ಮಾಡುವ ಬಟ್ಟಲಿಗೆ ಬೀಳುತ್ತಾ ಇದೆ. ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಕಲ್ಲಿದ್ದಲು ಬಳಕೆಯಿಂದ ಜನರಿಗೆ ಶ್ವಾಸಕೋಶದ ತೊಂದರೆ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ಖಾಯಿಲೆಗಳು ಹರಡುತ್ತದೆ.
ಇಷ್ಟೆಲ್ಲಾ ಗೊತ್ತಿದ್ದರೂ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಫಿಶ್ಮೀಲ್ ಧಣಿಗಳ ಹಣದ ಮುಂದೆ ಕೈಕಟ್ಟಿ ಕುಳಿತಿದ್ದಾರೆ.ಜನರ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುವ ಈ ಫಿಶ್ಮೀಲ್ ಕಂಪೆನಿಗಳ ವಿರುದ್ದ ಜಿಲ್ಲಾಡಳಿತ ಮಧ್ಯಪ್ರವೇಶಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಡಿವೈಎಫ್‌ಐ ನಿರ್ಣಾಯಕ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಉಳ್ಳಾಲ ತಾಲೂಕು ಮುಖಂಡರಾದ ರಝಾಕ್ ಮುಡಿಪು, ಅಶ್ಫಾಕ್ ಅಲೇಕಳ, ರಿಯಾಝ್ ಮಂಗಳೂರು, ಕೋಟೆಪುರ ಘಟಕ ಅಧ್ಯಕ್ಷ ವಾಕರ್, ಕಾರ್ಯದರ್ಶಿ ನೌಫಲ್, ಮುಖಂಡರಾದ ಅಶ್ಫಾಕ್ ಕೋಟೆಪುರ, ರಫೀಕ್ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.
ಡಿವೈಎಫ್‌ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ, ವಂದಿಸಿದರು.