
ಸಾಕು ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದವನ ವಿರುದ್ಧ ಜನಾಕ್ರೋಷ
ಕುಂದಾಪುರ: ತನ್ನ ಸಾಕು ನಾಯಿಯನ್ನು ಬೈಕಿನ ಹಿಂಬದಿಗೆ ಸರಪಳಿಯಿಂದ ಕಟ್ಟಿಕೊಂಡು ದರದರನೇ ಎಳೆದೊಯ್ಯುತ್ತಿರುವ ಅಮಾನವೀಯ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.
ಓರ್ವ ವ್ಯಕ್ತಿ ಶನಿವಾರ ಸಂಜೆ ಬೈಂದೂರು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತನ್ನ ಸಾಕು ನಾಯಿಯನ್ನು ಅತ್ಯಂತ ಕ್ರೂರವಾಗಿ ಬೈಕಿನ ಹಿಂಬದಿಗೆ ಸರಪಳಿಯಿಂದ ಕಟ್ಟಿ 2 ಕಿಮೀ ದೂರದವರೆಗೂ ಎಳೆದೊಯ್ದಿದ್ದಾನೆ. ಇದನ್ನು ನೋಡಿದ ಜನರು ತಕ್ಷಣ ಆತನನ್ನು ತಡೆದು ವಿಚಾರಿಸಿದಾಗ ಇದು ನಾನು ಮನೆಯಲ್ಲಿ ಸಾಕಿದ ನಾಯಿ, ವಿಚಾರಿಸಲು ನೀವ್ಯಾರು ಎಂದು ಉದ್ದಟತನ ತೋರಿದ. ಜನರು ಸೇರಿ ಗುಂಪು ದೊಡ್ಡದಾಗುತ್ತಿದ್ದಂತೆ ಇನ್ನು ಧರ್ಮದೇಟು ಬೀಳುತ್ತದೆ ಎಂಬುದನ್ನು ಗ್ರಹಿಸಿ ಸ್ವಲ್ಪ ಮೆತ್ತಗಾದ. ನಾಯಿಯನ್ನು ಸರಪಳಿಯಿಂದ ಬಿಚ್ಚಿ ಬೈಕ್ ಮುಂಭಾಗ ಕೂರಿಸಿಕೊಂಡ.
ಈತ ಬೈಂದೂರು ಭಾಗದ ಪಡುವರಿ ನಿವಾಸಿ ಎಂದು ತಿಳಿದು ಬಂದಿದೆ. ನಾಯಿಯನ್ನು ಎಳೆದೊಯ್ದ ರಭಸಕ್ಕೆ ನಾಯಿಯ ಕಾಲಿನಲ್ಲಿ ಗಾಯವಾಗಿ ರಕ್ತ ದರದರನೇ ಸುರಿಯುತ್ತಿತ್ತು. ರಸ್ತೆಯ ಮೇಲೆ ಬಿದ್ದಿರುವ ರಕ್ತವನ್ನು ನೋಡಿದ ಜನರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರ ಹಾಕಿದರು. ಮೂಕ ಪ್ರಾಣಿಯ ಮೇಲೆ ಈ ನಮೂನೆ ಕ್ರೌರ್ಯ ಮೆರೆದ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.