
3 ತಿಂಗಳ ಹಿಂದೆಯೇ ಸುಹಾಸ್ ಹತ್ಯೆಗೆ ಸ್ಕೆಚ್!
ಮಂಗಳೂರು: ಸುರತ್ಕಲ್ನಲ್ಲಿ ಹತ್ಯೆಗೆ ಒಳಗಾದ ಫಾಜಿಲ್ನ ಸಹೋದರ ಆದಿಲ್, ಜನವರಿಯಲ್ಲೇ ಸಫ್ವಾನ್ ತಂಡಕ್ಕೆ 3 ಲಕ್ಷ ರೂ. ಸುಪಾರಿ ಮೊತ್ತ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ.
ಅಂದರೆ 2003ರಲ್ಲೇ ಮೊದಲ ಬಾರಿಗೆ ಆದಿಲ್-ಸಫ್ವಾನ್ ನಡುವೆ ಭೇಟಿ ನಡೆದಿದೆ. 2023ರ ಸಪ್ಟೆಂಬರ್ 3ರಂದು ಸುಹಾಸ್ ಶೆಟ್ಟಿ ಆಪ್ತ ಪ್ರಶಾಂತ್ನಿಂದ ಸಫ್ವಾನ್ಗೆ ಇರಿತವಾಗಿದೆ. ಈ ವಿಷಯ ತಿಳಿದು ತಾನಾಗಿಯೇ ಸಫ್ವಾನ್ ನೋಡಲು ಆಸ್ಪತ್ರೆಗೆ ಆದಿಲ್ ಬಂದಿದ್ದ. ಅದೇ ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಸಫ್ವಾನ್-ಆದಿಲ್ ಮೊದಲ ಭೇಟಿಯಾಗಿದ್ದರು. ಈ ವೇಳೆ ಸಫ್ವಾನ್ ತಂಡದ ಮುಝಾಮಿಲ್ನ ಮೊಬೈಲ್ ನಂಬರ್ನ್ನು ಅದಿಲ್ ಪಡೆದಿದ್ದ. ಆ ಬಳಿಕ ಫೋನ್ನಲ್ಲೇ ಹಲವು ವಿಚಾರಗಳ ಬಗ್ಗೆ ಪರಸ್ಪರ ಮಾತುಕತೆ ನಡೆಸಿದ್ದರು.
ಈ ನಡುವೆ ಸಫ್ವಾನ್ ತಂಡದಿಂದ ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಲಾಗಿದೆ. ಆಗ ಆದಿಲ್ ಬಳಿ ಹಣಕಾಸು ನೆರವು ಕೇಳುವ ಬಗ್ಗೆ ಸಫ್ವಾನ್ಗೆ ಮುಝಾಮಿಲ್ ಸಲಹೆ ಮಾಡಿದ್ದನು. ಅದರಂತೆ ಕಳೆದ ಜನವರಿಯಲ್ಲಿ ನೇರವಾಗಿ ಫಾಜಿಲ್ ಸಹೋದರ ಆದಿಲ್ನ್ನು ಮುಝಾಮಿಲ್ ಭೇಟಿಯಾಗಿದ್ದ. ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಿರುವ ಬಗ್ಗೆ ಅದಿಲ್ಗೆ ಮುಝಾಮಿಲ್ ಮಾಹಿತಿ ನೀಡಿದ್ದ. ಇದೇ ವೇಳೆ ಐದು ಲಕ್ಷ ರೂ. ನೀಡುವುದಾಗಿ ಅದಿಲ್ ಭರವಸೆ ನೀಡಿದ್ದ. ಕೆಲವೇ ದಿನಗಳಲ್ಲಿ ಮೂರು ಲಕ್ಷ ರೂ. ಮೊತ್ತವನ್ನು ಅದಿಲ್ ಮುಝಾಮಿಲ್ಗೆ ನೀಡಿದ್ದ. ಹಣ ಪಡೆದು ಸುಹಾಸ್ ಹತ್ಯೆಗೆ ಸಫ್ವಾನ್ ತಂಡ ಪ್ರಾಥಮಿಕ ಯೋಜನೆ ಸಿದ್ಧಪಡಿಸಿತ್ತು.
ಎಲ್ಲಾ ಪ್ಲಾನ್ ರೂಪಿಸಿ ಮಾರ್ಚ್ 31, 2025ರೊಳಗೆ ಹತ್ಯೆ ಮಾಡಲು ನಿರ್ಧರಿಸಿತ್ತು. ಈ ನಡುವೆ ಮತ್ತೆ ಅದಿಲ್ ಬಳಿ ಬಾಕಿ ಎರಡು ಲಕ್ಷ ರೂ. ಮೊತ್ತಕ್ಕೆ ಸಫ್ವಾನ್ ತಂಡ ಬೇಡಿಕೆ ಇಟ್ಟಿರಿಸಿತ್ತು. ಆದರೆ ಸದ್ಯ ಹಣ ಇಲ್ಲ, ಕೆಲಸ ಆದ ಮೇಲೆ ಕೊಡುವುದಾಗಿ ಅದಿಲ್ ಹೇಳಿದ್ದ.
ಹಾಗಾಗಿ ಪ್ಲಾನ್ ರೂಪಿಸಿ ಏಪ್ರಿಲ್ 24 ರಂದೇ ಎರಡು ವಾಹನವನ್ನು ಹಂತಕರ ತಂಡ ಬಾಡಿಗೆಗೆ ಪಡೆದಿತ್ತು. ಮೀನಿನ ಪಿಕಪ್ ಮನೆಯಲ್ಲೇ ಇಟ್ಟು ಸ್ವಿಫ್ಟ್ ಕಾರಿನಲ್ಲೇ ಸುತ್ತಾಟ ನಡೆಸಿತ್ತು. ಸುಹಾಸ್ ಚಲನವಲನ ಗಮನಿಸಲು ಸ್ವಿಪ್ಟ್ ಕಾರಿನಲ್ಲಿ ಸುತ್ತಾಟ ಮಾಡಿದ್ದರು. ಕೊನೆಗೂ ಪ್ಲಾನ್ ರೂಪಿಸಿ ಪಕ್ಕಾ ಯೋಜನೆಯೊಂದಿಗೆ ದಾಳಿ ನಡೆಸಿದ್ದರು.