
ಮೀನುಗಾರಿಕಾ ಋತು ಮುಗಿಯುವ ಮುನ್ನವೇ ದಡ ಸೇರಿದ ಬೋಟ್‌ಗಳು..
ಮಂಗಳೂರು: ಈ ಸಾಲಿನ ಮೀನುಗಾರಿಕಾ ಋತು ಕೊನೆಗೊಳ್ಳಲು ಇನ್ನೂ ಕೆಲವೇ ಕೆಲ ದಿನಗಳು ಬಾಕಿ ಇದೆ. ಆದರೆ ಅವಧಿಗೂ ಮುನ್ನವೇ ಮೀನುಗಾರಿಕಾ ಬೋಟ್‌ಗಳು ಮಾತ್ರ ದಡ ಸೇರುತ್ತಿವೆ. ಬಂದರಿನಲ್ಲಿ ಮಂಗಳೂರು ಶೇ.80ರಷ್ಟು ಈಗಾಗಲೇ ಲಂಗರು ಹಾಕಿವೆ.
ಕಳೆದ ಆಗಸ್ಟ್‌ನಲ್ಲಿ ಆರಂಭಗೊಂಡ ಮೀನುಗಾರಿಕಾ ಋತು ಜನವರಿವರೆಗೂ ಉತ್ತಮ ಮೀನುಗಾರಿಕೆಯ ಮೂಲಕ ಆಶಾಭಾವ ಮೂಡಿಸಿತ್ತು. ಆದರೆ, ಜನವರಿ ಬಳಿಕ ಇದು ಕುಸಿತ ಕಾಣಲು ಆರಂಭಿಸಿದ್ದು, ಬಹುತೇಕ ಬೋಟ್‌ಗಳ ಮಾಲಕರು ನಿರಾಶರಾಗಿದ್ದಾರೆ. ಕಳೆದ 4 ತಿಂಗಳಿಂದ ಉತ್ತಮ ಮೀನುಗಾರಿಕೆ ನಡೆಯದೆ ಮೀನುಗಾರರು ಸಂಕಟ ಅನುಭವಿಸುವಂತಾಗಿದೆ.
ಮತ್ಸ್ಯಕ್ಷಾಮ, ಡೀಸೆಲ್ ದರ ದುಪ್ಪಟ್ಟು, ಕಾರ್ಮಿಕರ ವೇತನ, ಬಲೆ, ರೋಪ್, ಕಬ್ಬಿಣದ ಸಾಮಗ್ರಿಗಳು, ಐಸ್ ದರ ಸೇರಿದಂತೆ ಇತರ ನಿರ್ವಹಣೆ ಖರ್ಚುಗಳು ಕೂಡ ಹೆಚ್ಚಳವಾದ್ದರಿಂದ ಮೀನುಗಾರಿಕೆಗೆ ಬಹುತೇಕ ಹೊಡೆತ ಬಿದ್ದಿದೆ. ಪರಿಣಾಮವಾಗಿ, ಮೇ ಅಂತ್ಯದವರೆಗೂ ಮೀನುಗಾರಿಕೆಗೆ ಅವಕಾಶವಿದ್ದರೂ ಮಂಗಳೂರಿನಲ್ಲಿ ಶೇ.80ರಷ್ಟು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ.
ದಕ್ಕೆಗೆ ಒಳಪಟ್ಟಂತೆ ಮೋಟರೀಕೃತ ನಾಡದೋಣಿ, ಯಾಂತ್ರೀಕೃತ ದೋಣಿ ಸೇರಿದಂತೆ 2000ಕ್ಕೂ ಅಧಿಕ ಇವೆ. ಈಗ ಇರುವ ಮಂಗಳೂರು ದಕ್ಕೆ 600 ಮೀಟರ್ ಉದ್ದವಿದೆ. ಇದರಲ್ಲಿ ಒಂದು ಸಾಲಿನಲ್ಲಿ ಕ್ರಮ ಪ್ರಕಾರವಾಗಿ ಹೆಚ್ಚಾ ಕಡಿಮೆ 350 ಬೋಟುಗಳಿಗೆ ನಿಲ್ಲಲು ಮಾತ್ರ ಅವಕಾಶವಿದೆ. ಉಳಿದಂತೆ ಎಲ್ಲಾ ಬೋಟುಗಳು ಇತರ ಪ್ರದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಒಂದರ ಹಿಂದೆ ಇನ್ನೊಂದರಂತೆ 7 ಸಾಲುಗಳಲ್ಲಿ ಬೋಟುಗಳು ನಿಲ್ಲುವ ಪರಿಸ್ಥಿತಿ ಇಲ್ಲಿ ಈಗಲೂ ಇದೆ. ಮರದ ಹಾಗೂ ಸ್ಟೀಲ್ಬೋಟುಗಳು ಒಂದಕ್ಕೊಂದು ತಾಗಿ ಹಾನಿ ಸಂಭವಿಸುತ್ತಿವೆ.
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ದೋಣಿಗಳು 4-5 ಲಕ್ಷ ರೂ. ಖರ್ಚು ಮಾಡಿ ಸಮುದ್ರಕ್ಕಿಳಿದರೆ ಒಂದರಿಂದ 2 ಲಕ್ಷ ರೂ.ಗಳ ಮೀಮ ಕೂಡ ಸಿಗುವುದಿಲ್ಲ. ಆದಾಯ ಬಿಡಿ-ಖರ್ಚು ಮಾಡಿದ ಹಣಕ್ಕೆ ಪೂರಕವಾಗಿ ಮೀನು ಸಂಗ್ರಹವಾಗದಿದ್ದರೆ ಬೋಟ್ ಇಳಿಸುವುದಾದರೂ ಹೇಗೆ? ಕಾರ್ಮಿಕರಿಗೆ ವೇತನ ನೀಡುವುದಾದರೂ ಹೇಗೆ? ನಾವು ಮಾಡಿರುವ ಸಾಲ ತೀರಿಸುವುದಾದರೂ ಹೇಗೆ? ಎಂಬುದು ಬೋಟ್ ಮಾಲಕರ ಪ್ರಶ್ನೆ.
ವಿಪರೀತ ಸೆಕೆ ಸಹಿತ ಹವಾಮಾನ ಬದಲಾವಣೆ ಜತೆಗೆ ಕಡಲಿನ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಯಾಗುವ ‘ಎಲ್‌ನಿನೋ ಕಾರಣದಿಂದ ಮೀನು ಸ್ಥಳಾಂತರವಾಗಿ ಲಭ್ಯತೆ ಕಡಿಮೆಯಾಗಿದೆ. ಅನಿಯಮಿತ ಹಾಗೂ ಅವೈಜ್ಞಾನಿಕ ಮಾದರಿ ಮೀನುಗಾರಿಕೆ ನಡೆಸಿದ್ದೂ ಕೂಡ ಮೀನಿನ ಕೊರತೆಗೆ ದೊಡ್ಡ ಕಾರಣ. ಕೈಗಾರಿಕೆಗಳ ಕಲುಷಿತ ನೀರು ಸಹಿತ ಹಲವು ಕಾರಣಗಳಿಂದ ಕಡಲು ಮಲಿನವಾಗುತ್ತಿದೆ. ಮರಿ ಮೀನಗಳ ಹಿಡಿಯುವಿಕೆಯಲ್ಲಿ ನಿಯಂತ್ರಣ ಇಲ್ಲದಿರುವುದು, ಮಳೆಯ ಕೊರತಿಯೂ ಕಾರಣ. 7 ಸಾಲುಗಳಲ್ಲಿ ನಿಂತ ಬಳಿಕವೂ ಜಾಗವಿಲ್ಲದ ನೂರಾರು ಬೋಟ್ಗಳು ಕಸ್ಟಾ ಬೆಂಗ್ರೆ, ಬೋಳೂರು, ಕುದ್ರೋಳಿ ಬೊಕ್ಕಪಟ್ಟ, ಜಪ್ಪು ಮುಂತಾದ ಕಡೆಗಳಲ್ಲಿ ಬೋಟುಗಳನ್ನು ಲಂಗರು ಹಾಕಲಾಗಿದೆ.
ಪರ್ಸಿನ್ ಬೋಟ್‌ಗಳು ಶೇ.80ರಷ್ಟು ದಡ ಸೇರಿವೆ. ಟ್ರಾಲ್ ಬೋಟ್‌ಗಳು ಕೂಡ ಶೇ.75ರಷ್ಟು ದಡ ಸೇರಿವೆ. ಆಂಶಿಕ ಪ್ರಮಾಣದಲ್ಲಷ್ಟೇ ಈಗ ಮೀನುಗಾರಿಕೆ ನಡೆಯುತ್ತಿದೆ. ಹೀಗಾಗಿ ಆಳಸಮುದ್ರ ಮೀನುಗಾರಿಕೆಯಲ್ಲಿ ಕೆಲಸ ನಿರ್ವಹಿಸುವ ದೂರದ ರಾಜ್ಯದ ಕಾರ್ಮಿಕರು ಈಗಾಗಲೇ ವಾಪಾಸಾಗಿದ್ದಾರೆ. ಒರಿಸ್ಸಾ, ಆಂಧ್ರಪ್ರದೇಶ, ಜಾರ್ಖಂಡ್, ತಮಿಳುನಾಡು ಸಹಿತ ವಿವಿಧ ರಾಜ್ಯದ ನೂರಾರು ಕಾರ್ಮಿಕರು ಈಗಾಗಲೇ ಬಂದರು ಬಿಟ್ಟು ಊರಿಗೆ ತೆರಳಿದ್ದಾರೆ.
ಮೀನುಗಳು ಸಂತಾನೋತ್ಪತ್ತಿ ಮಾಡುವ ಮಳೆಗಾಲದಲ್ಲಿ ಯಾಂತ್ರಿಕ ದೋಣಿಗಳು ನೀರಿಗೆ ಇಳಿದರೆ ಅವುಗಳ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತದೆ. ಇದರಿಂದ ಮತ್ತ್ವ ಸಂಕುಲಕ್ಕೆ ಹೊಡೆತ ಬೀಳಲಿದೆ. ಜತೆಗೆ ಈ ಸಮಯದಲ್ಲಿ ವಿಪರೀತ ಗಾಳಿ-ಮಳೆ ಇರುವುದರಿಂದ ಮೀನುಗಾರಿಕೆ ನಡೆಸಲು ಅಪಾಯ. ಹೀಗಾಗಿ ಮಳೆಗಾಲದ ಸಮಯ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ನಿಯಮ. ಈ ವೇಳೆ ನಾಡದೋಣಿಗಳು ಮೀನು ಬೇಟೆಗೆ ಇಳಿಯುತ್ತವೆ. ದೋಣಿ-ಬಲೆಯೊಂದಿಗೆ ಕಡಲಿಗೆ ಇಳಿಯುವ ಇವರು 10 ಅಶ್ವಶಕ್ತಿಯ ಎಂಜಿನ್ ಅಳವಡಿಸಿದ ದೋಣಿಗಳಲ್ಲಿ ಸಮುದ್ರದ ಬದಿ ಹಾಗೂ ನದಿಗಳಲ್ಲಿ ಜೂನ್ 1ರಿಂದ ಮೀನುಗಾರಿಕೆ ನಡೆಸುತ್ತಾರೆ.