
ಬ್ಯಾರಿ ಜನಾಂಗವನ್ನು ಅವಹೇಳನಗೈದ ಶಾಸಕ ಹರೀಶ್ ಪೂಂಜಗೆ ಹೈಕೋರ್ಟ್ನಲ್ಲಿ ಮುಖಭಂಗ: ಕೆ.ಕೆ ಶಾಹುಲ್ ಹಮೀದ್
ಮಂಗಳೂರು: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಬ್ಯಾರಿ ಜನಾಂಗವನ್ನು ನಿಂದಿಸಿ ಕೋಮು ದ್ವೇಷ ಭಾಷಣ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಠಿಣ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿರುತ್ತದೆ.
ಕೇಸ್ ದಾಖಲಾದಾಗ ನೂರು ಕೇಸ್ ದಾಖಲಾದರೂ ಹೆದರುವುದಿಲ್ಲ ಎಂದು ಹರೀಶ್ ಪೂಂಜ ಸವಾಲ್ ಹಾಕಿದ್ದರು. ಇದೀಗ ತನ್ನ ಮೇಲಿನ ಎಫ್ಐಆರ್ ರದ್ದುಗೊಳಿಸುವಂತೆ ಹರೀಶ್ ಪೂಂಜ ಹೈಕೋರ್ಟ್ ಮೊರೆ ಹೋಗಿದ್ದಾರೆ. ನೂರು ಕೇಸ್ ದಾಖಲಾದರೂ ಹೆದರುವುದಿಲ್ಲ ಎಂದಿದ್ದ ಹರೀಶ್ ಪೂಂಜ ಒಂದೇ ಕೇಸ್ಗೆ ಹೆದರಿರುವುದು ಸ್ಪಷ್ಟವಾಗಿದೆ.
ಹರೀಶ್ ಪೂಂಜ ಅವರ ಆರಂಭ ಶೂರತನ ಕರಗಿ ಅವರಲ್ಲಿ ಕಾನೂನಿನ ಭಯ ಆವರಿಸಿರುವುದು ಅವರ ನಡೆಯಿಂದ ಗೋಚರಿಸುತ್ತಿದೆ.
ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವ ಹರೀಶ್ ಪೂಂಜ ಅವರಿಗೆ ಉಚ್ಛ ನ್ಯಾಯಾಲಯದಲ್ಲೂ ಮುಖಭಂಗ ಉಂಟಾಗಿದೆ. ಎಫ್ಐಅರ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಹರೀಶ್ ಪೂಂಜ ಸಲ್ಲಿಸಿದ್ದ ರಿಟ್ ಅರ್ಜಿಗೆ ಘನ ನ್ಯಾಯಲಯ ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ. ಪ್ರಕರಣ ರದ್ದುಗೊಳಿಸುವ ಬಗ್ಗೆ ಹೈಕೋರ್ಟ್ ಯಾವುದೇ ಆದೇಶ ನೀಡದಿರುವುದು ಆಶಾದಾಯಕ ಬೆಳವಣಿಗೆ.
ರಿಟ್ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಹರೀಶ್ ಪೂಂಜ ಪರ ವಕೀಲರು ಹೈಕೋರ್ಟ್ನ ರಜಾಕಾಲದ ಏಕಸದಸ್ಯ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ಜನಪ್ರತಿನಿಧಿಗೆ ಸಂಬಂಧಿಸಿದ ಪ್ರಕರಣದ ಅರ್ಜಿಯು ಹೈಕೋರ್ಟ್ ನ್ಯಾಯಪೀಠದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನ್ಯಾಯಾಧೀಶರು ಮೌಖಿಕವಾಗಿ ತಿಳಿಸಿ ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು ಅರ್ಜಿಯನ್ನು ಇದೇ 20ಕ್ಕೆ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ಆದೇಶಿಸಿದೆ.
ಮುಂದಿನ ವಿಚಾರಣೆಯಲ್ಲಿ ಹರೀಶ್ ಪೂಂಜ ಅವರ ಪುನರಾವರ್ತಿತ ಕೋಮು ದ್ವೇಷ ಭಾಷಣಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಮತ್ತು ದೂರುದಾರರು ಉಚ್ಛ ನ್ಯಾಯಲಯಕ್ಕೆ ಗಮನಕ್ಕೆ ತಂದು ಎಫ್ಐಅರ್ ರದ್ದುಗೊಳಿಸದಂತೆ ಮನವಿ ಮಾಡಲಿದ್ದು, ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಆಗಲ್ಲ ಎಂಬ ವಿಶ್ವಾಸ ಇದೆ. ಕೋಮು ದ್ವೇಷಿ ಶಾಸಕ ಹರೀಶ್ ಪೂಂಜ ಅವರಿಗೆ ಈ ಬಾರಿ ತಕ್ಕಶಾಸ್ತಿ ಆಗಲಿದ್ದು, ಈ ಪ್ರಕರಣ ಕೋಮು ದ್ವೇಷ ಭಾಷಣ ಮಾಡುವವರಿಗೆ ಒಂದು ಪಾಠವಾಗಲಿದೆ ಎಂಬ ಭರವಸೆ ಇದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.