ತಲವಾರು ದಾಳಿ ಎಂಬ ಸುಳ್ಳು ಸುದ್ದಿ: ಜಮಾಯಿಸಿದ ಜನತೆ

ತಲವಾರು ದಾಳಿ ಎಂಬ ಸುಳ್ಳು ಸುದ್ದಿ: ಜಮಾಯಿಸಿದ ಜನತೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಬೋಳ್ಯಾರಿನಲ್ಲಿ ಮುಸ್ಲಿಂ ಯುವಕನ ಮೇಲೆ ಮತ್ತೆ ತಲವಾರು ದಾಳಿಯೆಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಸಣ್ಣ ವಿಡಿಯೋ ತುಣುಕು ವೈರಲ್ ಆಗಿದ್ದು ಅಂತಹ ಘಟನೆ ಆಗಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ತಪ್ಪು ಕಲ್ಪನೆಯಿಂದ ಉದ್ರಿಕ್ತ ಜನರು ಸೇರಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. 

ಕಳೆದ ವಾರ, ಜೂನ್ 11ರಂದು ಬಂಟ್ವಾಳ ಸಜಿಪನಡು ಎಂಬಲ್ಲಿ ಉಮ್ಮರ್ ಫಾರೂಕ್ ಎಂಬವರು ತನ್ನ ಮೇಲೆ ಅಪರಿಚಿತ ಯುವಕರು ತಲವಾರು ಬೀಸಿದ್ದಾರೆಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ತಾನು ಜೀಪಿನಲ್ಲಿ ತೆರಳುತ್ತಿದ್ದಾಗ ದೇರಾಜೆ ಎಂಬಲ್ಲಿ ಎದುರಿಗೆ ಸಿಕ್ಕಿದ್ದ ಬೈಕ್ ನಲ್ಲಿದ್ದ ಅಪರಿಚಿತರು ತಲವಾರು ಬೀಸಿದ್ದು ಜೀಪಿನ ಸೈಡ್ ಮಿರರ್ ಹಾನಿಯಾಗಿತ್ತೆಂದು ದೂರಿನಲ್ಲಿ ಹೇಳಿದ್ದರು. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳದಲ್ಲಿ ಸಿಸಿಟಿವಿ ದೃಶ್ಯಾವಳಿ ತಪಾಸಣೆ ನಡೆಸಿದ್ದು ಸದ್ರಿ ಘಟನೆಗೂ ದೂರುದಾರರು ನೀಡಿರುವ ದೂರಿಗೂ ವ್ಯತ್ಯಾಸ ಕಂಡುಬಂದಿದ್ದು, ಈ ಬಗ್ಗೆ  ಪರಿಶೀಲನೆ ಮುಂದುವರಿದಿರುತ್ತದೆ ಎಂದು ತಿಳಿಸಿದ್ದಾರೆ. 

ಈ ನಡುವೆ, ಶುಕ್ರವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಮೊಹಮ್ಮದ್ ಮುಕ್ಬುಲ್ (34) ಎಂಬವರು ಸಂಬಂಧಿಯೋರ್ವರ ಸ್ಕೂಟರ್ ನಲ್ಲಿ ಸಹ ಪ್ರಯಾಣಿಕರಾಗಿ ಕುಳಿತು ಬೊಳ್ಯಾರ್ ಕಡೆಯಿಂದ ಮೆಲ್ಕಾರ್ ಕಡೆಗೆ ತೆರಳುತ್ತಿದ್ದಾಗ, ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ, ಅಲ್ಲಿ ಬೋಳ್ಯಾರ್ ಕಡೆಗೆ ಮುಖಮಾಡಿ ನಿಲ್ಲಿಸಿದ್ದ ಸ್ಕೂಟರ್ ನಲ್ಲಿ ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿ ಕುಳಿತಿದ್ದು, ಅವರ ಪೈಕಿ ಓರ್ವ ವ್ಯಕ್ತಿ ದೂರುದಾರರು ತೆರಳುತ್ತಿದ್ದ ಸ್ಕೂಟರ್ ಕಡೆಗೆ ಓಡಿ ಬಂದಿರುತ್ತಾನೆ. ಆ ವೇಳೆ ಆತನ ಕೈಯಲ್ಲಿ ತಲವಾರು ಅಥವಾ ಯಾವುದೇ ಮಾರಕಾಯುಧವನ್ನು ದೂರುದಾರರು ನೋಡಿರುವುದಿಲ್ಲ. ಸದ್ರಿ ವ್ಯಕ್ತಿ ಓಡಿ ಬರುತ್ತಿರುವುದನ್ನು ಗಮನಿಸಿದ ದೂರುದಾರರು ಸ್ಕೂಟರ್ ಚಾಲನೆ ಮಾಡುತ್ತಿದ್ದ ತನ್ನ ಸಂಬಂಧಿಕನಲ್ಲಿ ವೇಗವಾಗಿ ಹೋಗುವಂತೆ ತಿಳಿಸಿದ್ದು, ಆ ಬಳಿಕ ಹಿಂತಿರುಗಿ ನೋಡದೇ ನಂದಾವರದ ಮನೆಗೆ ತೆರಳಿ ತನ್ನ ತಂದೆಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದರೆ ಇದನ್ನೇ ಕೆಲವರು ಮುಸ್ಲಿಂ ಯುವಕನಿಗೆ ತಲವಾರು ದಾಳಿಯೆಂದು ಸುದ್ದಿ ಹಬ್ಬಿಸಿದ್ದು ಸ್ಥಳದಲ್ಲಿ ಜನರು ಜಮಾಯಿಸಿದ್ದರು. ಈ ಕುರಿತು ವಾಟ್ಸಾಪ್ ಗಳಲ್ಲಿ ಪ್ರಸಾರವಾಗುತ್ತಿರುವ ತಲವಾರು ದಾಳಿ ಎಂಬ ಸುಳ್ಳು ಸುದ್ದಿಗಳಿಗೂ ತನಗೂ ಯಾವುದೇ ಸಂಬಂಧ ಇರುವುದಿಲ್ಲ ಹಾಗೂ ತಾನು ಸ್ಥಳದಲ್ಲಿ ಜನರನ್ನು ಜಮಾವಣೆಗೊಳಿಸಿರುವುದಿಲ್ಲ ಎಂಬುದಾಗಿ ದೂರುದಾರು ವಿಚಾರಣೆಯ ವೇಳೆ ತಿಳಿಸಿರುತ್ತಾರೆ. ಸದ್ರಿಯವರ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 73/2025, u/s 125 BNS ರಂತೆ ಪ್ರಕರಣ ದಾಖಲಿಸಲಾಗುತ್ತಿದ್ದು, ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ.ಅರುಣ್ ಸ್ಪಷ್ಟನೆ ನೀಡಿದ್ದಾರೆ. 

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆ ಪಿ.ಎಸ್.ಐ ಧಾವಿಸಿದ್ದು, ಅಲ್ಲಿ ನೆರೆದಿದ್ದ ಕೆಲವರು ಕಳೆದ ವಾರ ಬಕ್ರೀದ್ ಸಮಯದಲ್ಲಿ ಸಜಿಪನಡುವಿನಲ್ಲಿ ಸಾಗಿಸುತ್ತಿದ್ದ ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕಳೆದ ವಾರದಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂಬುದಾಗಿ ಪ್ರಶ್ನೆ ಮಾಡಿರುತ್ತಾರೆ. ಕಳೆದ ವಾರದಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಹಾಗೂ ಬಕ್ರೀದ್ ಸಮಯದಲ್ಲಿ ಹಸುಗಳನ್ನು  ವಶಪಡಿಸಿಕೊಂಡ ಪ್ರಕರಣಕ್ಕೂ ಯಾವ ರೀತಿ ಸಂಬಂಧ ಇರುತ್ತದೆ ಎಂಬ ಆಯಾಮದಲ್ಲೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ವರುಷ್ಠಾಧಿಕಾರಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article