
ಹಾವು ಕಡಿದು ಸಾವು
Thursday, June 5, 2025
ಬಂಟ್ವಾಳ: ವಿಷಪೂರಿತ ಹಾವೊಂದು ಕಡಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ಸಂಭವಿಸಿದೆ.
ಇಲ್ಲಿನ ದಿ.ಇಸ್ಮಾಯಿಲ್ ಅವರ ಪುತ್ರ ಅಶ್ರಫ್(೨೮) ಅವರು ಮೃತಪಟ್ಟವರಾಗಿದ್ದಾರೆ.
ಕೂಲಿ ಕಾರ್ಮಿಕರಾಗಿದ್ದ ಅವರು ಪಾಂಡವರಕಲ್ಲಿನಲ್ಲಿ ಮನೆಯೊಂದರಲ್ಲಿ ಅಡಿಕೆ ಸುಲಿಯುವ ಕೆಲಸ ಮಾಡುತ್ತಿರುವಾಗ ಕಾಲಿನ ಬೆರಳಿಗೆ ವಿಷದ ಹಾವು ಕಚ್ಚಿತ್ತು. ತಕ್ಷಣ ಅವರಿಗೆ ಸಮೀಪದ ನಾಟಿ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅವರ ಸ್ಥಿತಿ ಉಲ್ಬಣವಾಗುತ್ತಿದ್ದಂತೆ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆದರೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಅಶ್ರಫ್ ಅವರಿಗೆ ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ. ಅವರ ತಂದೆ ನಿಧನರಾಗಿದ್ದು, ಮನೆಗೆ ಅಶ್ರಫ್ ಅವರು ಆಧಾರವಾಗಿದ್ದರು.