
ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನಿಂದ ಸರಕಾರಿ ಶಾಲೆಗೆ ವಿಸ್ತ್ರತ ಮೇಲ್ಛಾವಣಿ ಕೊಡುಗೆ
ಮಂಗಳೂರು: ಮಂಗಳೂರು ತಾಲೂಕಿನ ಅತ್ತಾವರದಲ್ಲಿರುವ ಸರಕಾರಿ ಪ್ರೌಢಶಾಲೆಯ ಸಭಾಂಗಣಕ್ಕೆ ವಿಸ್ತ್ರತ ಮೇಲ್ಛಾವಣೆಯನ್ನು ಹಾಕಿಕೊಟ್ಟಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಟ್ರಸ್ಟಿ ಹನುಮಂತ ಕಾಮತ್ ಅವರನ್ನು ಶಾಲೆಯ ಶಿಕ್ಷಕ ವೃಂದ ಹಾಗೂ ಪೋಷಕರ ಪರವಾಗಿ ಶಾಲೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್ ಅವರು, ಮಳೆಗಾಲದಲ್ಲಿ ಮಳೆಯ ನೀರು ಸಭಾಂಗಣದೊಳಗೆ ನುಗ್ಗಿ, ತರಗತಿ, ಆಫೀಸು, ಕಾರಿಡಾರುಗಳಲ್ಲಿ ನಿಂತು ಮಕ್ಕಳಿಗೆ, ಶಿಕ್ಷಕರಿಗೆ ಪಾಠದ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಉಂಟು ಮಾಡುತ್ತಿತ್ತು. ಇದರಿಂದ ನೊಂದ ಶಿಕ್ಷಕರು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ (ರಿ)ನಿಂದ ಸಹಾಯಕ್ಕೆ ಮನವಿ ಮಾಡಿದ್ದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷರಾಗಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ಅಂದಾಜು ವೆಚ್ಚ 2 ಲಕ್ಷ ರೂ.ಗಳಲ್ಲಿ ನೂತನ ವಿಸ್ತ್ರತ ಮೇಲ್ಛಾವಣಿಯನ್ನು ಹಾಕಿಕೊಡಲಾಗಿದೆ. ಇದರಿಂದ ಮಳೆಗಾಲದಲ್ಲಿ ಮಕ್ಕಳು, ಶಿಕ್ಷಕರು ಪಾಠ, ಪ್ರವಚನಗಳನ್ನು ಯಾವುದೇ ತೊಂದರೆ ಇಲ್ಲದೇ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಶ್ಲಾಘಿಸಿದರು.
ಟ್ರಸ್ಟ್ ಪರವಾಗಿ ಅಭಿನಂದನೆ ಸ್ವೀಕರಿಸಿದ ಹನುಮಂತ ಕಾಮತ್ ಅವರು ಎಲ್ಲರ ಸಹಕಾರವನ್ನು ಪಡೆದು, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇಂತಹ ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಮಕ್ಕಳಿಗೆ ಕಲಿಯಲು ಸೂಕ್ತ ವಾತಾವರಣ ನಿರ್ಮಿಸುವಲ್ಲಿ ನಮ್ಮ ಟ್ರಸ್ಟ್‌ನ ಕೊಡುಗೆ ಉಪಯೋಗವಾಗುತ್ತಿರುವುದು ತುಂಬಾ ಸಂತೋಷ ತಂದಿದೆ. ಅತ್ತಾವರದ ಸರಕಾರಿ ಶಾಲೆಯ ಶಿಕ್ಷಕರ ಸಮರ್ಪಣಾ ಮನೋಭಾವದಿಂದ ಇಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ಮುಂದೆಯೂ ಶಾಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು, ದಾನಿಗಳು ಮುಂದೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ದಾನಿಗಳು ನೀಡಿದ ನೋಟ್ಸ್ ಪುಸ್ತಕಗಳನ್ನು ವಿತರಿಸಲಾಯಿತು. ವಿವಿಧ ಸಂಘಗಳನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸಿಎ ಶಾಂತಾರಾಮ್ ಶೆಟ್ಟಿ ಅವರು ಭಾಗವಹಿಸಿ ಉತ್ತಮ ಅಂಕಗಳನ್ನು ಪಡೆದ ಹತ್ತನೇ ತರಗತಿಯ ಮಕ್ಕಳಿಗೆ ವೈಯಕ್ತಿಕ ನೆಲೆಯಲ್ಲಿ ನಗದು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಶಾಲಾ ದೈಹಿಕ ಶಿಕ್ಷಕಿ ಲಿಲ್ಲಿ ಪಾಯಸ್, ಪಿಟಿಎ ಉಪಾಧ್ಯಕ್ಷ ಲಕ್ಷ್ಮಿ ಮಂಜಣ್ಣ, ಎಸ್‌ಡಿಎಂ ಸದಸ್ಯ ಮಂಜುನಾಥ್ ನಾಯಕ್, ಶಿಕ್ಷಕರಾದ ವೀಣಾ, ಸುಜೇತಾ, ಹರಿಪ್ರಸಾದ್, ಪ್ರದೀಪ್ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.