
ಸಿದ್ದರಾಮಯ್ಯ ಸರಕಾರದಿಂದ ಜಾತಿ ಒಡೆಯುವ ಕೆಲಸ: ಶೋಭಾ ಕರಂದ್ಲಾಜೆ
ಮಂಗಳೂರು: ಲಿಂಗಾಯಿತರು, ಬ್ರಾಹ್ಮಣರು ಸಹಿತ ಎಲ್ಲ ಜಾತಿಗಳನ್ನು ಒಡೆಯುವ ಕೆಲಸವನ್ನು ಈ ಜಾತಿಗಣತಿಯ ಮೂಲಕ ಸಿದ್ದರಾಮಯ್ಯ ಅವರ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಲ್ಲಿ ಆರ್‌ಸಿಬಿ ವಿಜಯೋತ್ಸವ ಸಂದರ್ಭ 11 ಮಂದಿ ಸಾವು ಸಂಭವಿಸಿದ ದುರಂತವನ್ನು
ಮರೆಮಾಚಲು ರಾಜ್ಯ ಸರ್ಕಾರ ಹೈಕಮಾಂಡ್ ಜತೆ ಸೇರಿ ಜಾತಿ ಮರುಗಣತಿಯ ನಾಟಕ ಮಾಡುತ್ತಿದೆ. ಇದರ ಅಂತಿಮ ಉದ್ದೇಶ ಅಲ್ಪಸಂಖ್ಯಾತರ ಸಂಖ್ಯೆ ಅಧಿಕ ತೋರಿಸಿ ಅವರಿಗೆ ಅಧಿಕ ಪ್ರಮಾಣದ ಮೀಸಲಾತಿ ಒದಗಿಸುವುದು ಆಗಿದೆ ಎಂದರು.
ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. ರೈಲ್ವೆ, ಮೆಟ್ರೋ, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಸೌಲಭ್ಯ ವಿಸ್ತರಣೆಗೆ ರಾಜ್ಯ ಸರ್ಕಾರ ಅಗತ್ಯ ಜಮೀನು ಒದಗಿಸುತ್ತಿಲ್ಲ. ರಾಜ್ಯದ ಜಿಲ್ಲಾಧಿಕಾರಿಗಳು ಸಹಕಾರ ಕೊಡುತ್ತಿಲ್ಲ. ನೀತಿ ಆಯೋಗದ ರಾಜ್ಯದ ಸಭೆಗಳಿಗೆ ಮುಖ್ಯಮಂತ್ರಿಗಳು ಹಾಜರಾಗುವುದಿಲ್ಲ. ಸಭೆಯಲ್ಲಿ ರಾಜ್ಯದ ಬೇಡಿಕೆಗಳನ್ನು ಮುಂದಿಡಬೇಕಾದ ಮುಖ್ಯಮಂತ್ರಿಯವರು ಗೈರು ಹಾಜರಾದರೆ ನಷ್ಟವಾಗುವುದು ಜನರಿಗೆ ಎಂದವರು ಆಕ್ಷೇಪಿಸಿದರು.
ರಾಜ್ಯ ಸರ್ಕಾರದ ತೆರಿಗೆ ಪಾಲು ಕೇಂದ್ರ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿಯವರು ಆರೋಪಿಸುತ್ತಾರೆ. 2004 ರಿಂದ 2014 ತನಕ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಂದಿರುವ ಮೊತ್ತ 1,044,58 ಕೋಟಿ ರುಪಾಯಿ. ಆದರೆ 2014 ರಿಂದ 2024 ತನಕ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 5,42,341 ಕೋಟಿ ರೂ. ಬಂದಿದೆ. ಇದರಲ್ಲಿ ಯಾವುದು ದೊಡ್ಡ ಮೊತ್ತ ಎನ್ನುವುದನ್ನು ಹಣಕಾಸು ಸಚಿವರಾಗಿ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ಹೇಳಬೇಕು ಎಂದರು.
ಸಿದ್ದರಾಮಯ್ಯ ಅವರು ಗ್ಯಾರಂಟಿ ಹೆಸರಿನಲ್ಲಿ ಸುಮ್ಮನೆ ನಾಟಕ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭ ನಾಟಕ ಮಾಡೋಣ. ಆದರೆ ಇತರ ಸಂದರ್ಭ ಅಭಿವೃದ್ಧಿ ಕೆಲಸಗಳಿಗೆ ಗಮನ ಕೊಡೋಣ ಎಂದು ಸಲಹೆ ನೀಡಿದರು.