
ಆರ್.ಎಸ್.ಎಸ್ ಷಡ್ಯಂತ್ರ ಬಯಲುಗೊಂಡರೆ ಸೌಹಾರ್ದ ಸಮಾಜ ನಿರ್ಮಾಣದ ಹಾದಿ ಸುಲಭ: ಬಿ.ಕೆ. ಇಮ್ತಿಯಾಜ್
Sunday, June 29, 2025
ಮಂಗಳೂರು: ದೇಶದಲ್ಲಿ ಈವರೆಗೂ ವಿವಿಧ ಸ್ವರೂಪದಲ್ಲಿ ನಡೆದ ಎಲ್ಲಾ ಕೋಮುಗಲಭೆಯ ಹಿಂದೆ ಆರ್.ಎಸ್.ಎಸ್ ವಿಭಜನೆಯ ರಾಜಕಾರಣ ಅಡಗಿದೆ. ಹಿಂದೂ ಸಮುದಾಯವನ್ನು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿ ಕಟ್ಟಿ ನಿರಂತರ ನಡೆಸಿದ ದಾಳಿ ದಬ್ಬಾಳಿಕೆಯಿಂದ ಪರಸ್ಪರ ಮಾನವೀಯ ಸಂಬಂಧಗಳನ್ನು ಘಾಸಿಗೊಳಿಸಿದೆ. ಈ ದೇಶದ ಕೋಮುರಾಜಕಾರಣದಲ್ಲಿ ಅರಾಜಕತೆಯನ್ನು ಸೃಷ್ಟಿಸಿರುವ ಆರ್.ಎಸ್.ಎಸ್ ನ ಷಡ್ಯಂತ್ರಗಳು ಬಯಲುಗೊಂಡರೆ ಮಾತ್ರವೇ ಸೌಹಾರ್ದ ಸಮಾಜ ನಿರ್ಮಾಣದ ಹಾದಿ ಸುಲಭವಾಗಲಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹೇಳಿದರು.
ಅವರು ಇಂದು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ವತಿಯಿಂದ ಕಾಂ ಶ್ರೀನಿವಾಸ್ ಬಜಾಲ್ ಅವರ 23ನೇ ವರುಷದ ಹುತಾತ್ಮ ದಿನದ ಅಂಗವಾಗಿ ಬಜಾಲ್ ಭಗತ್ ಸಿಂಗ್ ಭವನದಲ್ಲಿ ನಡೆದ ಸೌಹಾರ್ದ ಯುವ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇತ್ತೀಚೆಗೆ ಕುಡುಪುವಿನಲ್ಲಿ ನಡೆದ ಅಮಾಯಕನೊಬ್ಬನ ಗುಂಪು ಹತ್ಯೆಯ ಸಂದರ್ಭ ಕ್ರಿಕೇಟ್ ಆಡುವ ಯುವಕರ ಮನಸ್ಸನ್ನು ಕೆಡಿಸಿರುವ ಶಕ್ತಿ ಯಾವುದು ಆ ರೀತಿಯ ಮನಸ್ಥಿತಿ ಹೊಂದಲು ಯುವ ಸಮುದಾಯವನ್ನು ಪ್ರಚೋದಿಸಿದ ರಾಜಕೀಯ ಷಡ್ಯಂತ್ರವನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು. ಈ ದೇಶದ ಮಹಾತ್ಮ ಗಾಂಧಿಜೀಯಿಂದ ಹಿಡಿದು ಡಿವೈಎಫ್ಐ ಮುಖಂಡ ಶ್ರೀನಿವಾಸ್ ಬಜಾಲ್ ಹಾಗೂ ಇತ್ತೀಚೆಗಿನ ಹತ್ಯೆಗಳ ಹಿಂದೆ ಆರ್.ಎಸ್.ಎಸ್ ದುರುದ್ದೇಶ ಅಡಗಿದೆ. ದೇಶದ ಸಂವಿಧಾನದ ಆಶಯ, ಸಾರ್ವಭೌಮತೆ, ಸೌಹಾರ್ದ ಪರಂಪರೆಗೆ ಅಡ್ಡಿಯಾಗಿರುವ ಸಂಘಪರಿವಾರವನ್ನು ಈ ದೇಶಕ್ಕೆನೆ ಅಪಾಯವನ್ನು ತಂದೊಡ್ಡುತ್ತದೆ. ಮತೀಯ ದ್ವೇಷ ಹರಡುವ ಬಹುಸಂಖ್ಯಾತ ಕೋಮುವಾದ ಆಗಲಿ ಅಥವಾ ಅಲ್ಪಸಂಖ್ಯಾತ ಮೂಲಭೂತವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ದ್ವೇಷರಾಜಕಾರಣ ಸಂಘಟನೆಗಳಿಂದ ದೂರ ಸರಿದು ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಲು ಸಾಧ್ಯವಾಗಬೇಕೆಂದು ಕರೆ ನೀಡಿದರು.
ಜಪ್ಪಿನಮೊಗರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಸುಧಾಕರ್ ಕುಲಾಲ್ ಮಾತನಾಡಿ, ಬಜಾಲ್ , ಜಪ್ಪಿನಮೊಗರು ಸುತ್ತಮುತ್ತಲ ಪರಿಸರದಲ್ಲಿ ಈವರೆಗೂ ಮತೀಯ ಹಿಂಸೆಗಳು ನಡೆದಿಲ್ಲ. ಇಂತಹ ಸೌಹಾರ್ದಯುತ ವಾತಾವರಣ ಇಲ್ಲಿ ಉಳಿಸಲು ಸಾಧ್ಯವಾಗಿರೋದು ಇಲ್ಲಿನ ಜಾತ್ಯಾತೀತ ಶಕ್ತಿಗಳ ಸಮಾಜಮುಖಿ ಚಿಂತನೆಗಳಿಂದ ಎಂದರು. ಇಂತಹ ವಿಷಯಗಳಲ್ಲಿ ಜಾತ್ಯಾತೀತ ಶಕ್ತಿಗಳು ಸೌಹಾರ್ದ ಸಮಾಜವನ್ನು ಕಟ್ಟುವಲ್ಲಿ ಐಕ್ಯತೆಯಿಂದ ತೊಡಗಿಸಿಕೊಳ್ಳಲು ಸಾಧ್ಯವಾಗಬೇಕು ಎಂದರು.
ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಯುವಜನರು ಸಂಘಪರಿವಾರದ ಮತೀಯ ರಾಜಕಾರಣಕ್ಕೆ ಬಲಿಯಾಗದೆ ಬದುಕಿನ ರಾಜಕಾರಣದ ಪ್ರಶ್ನೆಯನ್ನು ಎತ್ತಿ ಹಿಡಿಯಲು ಮುಂದಾಗಬೇಕು. ಯುವಜನರನ್ನು ಬಾಧಿಸುವ ಉದ್ಯೋಗ, ಶಿಕ್ಷಣ, ಆರೋಗ್ಯದಂತಹ ಪ್ರಮುಖ ವಿಚಾರಗಳಿಗೆ ಹೋರಾಡಲು ಮುಂದಾಗಬೇಕು. ಕೋಮುವಾದ ರಾಜಕಾರಣ ಹಿನ್ನಲೆಗೆ ಸರಿಸಿ ಬದುಕಿನ ಪ್ರಶ್ನೆಗಳನ್ನು ಮುನ್ನಲೆಗೆ ತರಲು ಸಾಧ್ಯವಾಗಬೇಕು ಎಂದರು.
ಕಾವುಬೈಲ್ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ಬಿ. ನಾಗೇಶ್ ಶೆಟ್ಟಿ, ಬಜಾಲ್ ಹೋಲಿ ಸ್ಪಿರೀಟ್ ಚರ್ಚ್ ಸಮಿತಿಯ ಪದಾಧಿಕಾರಿ ವಿಲ್ಪ್ರೇಡ್ ಬಜಾಲ್, ಯುವ ಕಾಂಗ್ರೇಸ್ ಮುಖಂಡ ಆಸೀಫ್ ಬಜಾಲ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ರಿಜ್ವಾನ್ ಹರೇಕಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಾಜಿ ಕಾರ್ಪೊರೇಟರ್ ಜಯಂತಿ ಬಿ ಶೆಟ್ಟಿ, ಡಿಎಸ್ಎಸ್ ಮುಖಂಡ ಕಮಲಾಕ್ಷ ಬಜಾಲ್, ರಿಯಾಜ್ ಕಣ್ಣೂರು ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ವಹಿಸಿದ್ದರು. ಡಿವೈಎಫ್ಐ ಮುಖಂಡ ದೀಪಕ್ ಬಜಾಲ್ ಸ್ವಾಗತಿಸಿ, ಜಗದೀಶ್ ಬಜಾಲ್ ವಂದಿಸಿದರು.
ಇದೇ ವೇದಿಕೆಯಲ್ಲಿ ಬಜಾಲ್ ವಿಭಾಗ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.