
ಎಸ್‌ಕೆಎಫ್-ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ನಡುವೆ ಒಪ್ಪಂದ
ಮೂಡುಬಿದಿರೆ: ಅತ್ಯಾಧುನಿಕ ಭತ್ತ ಸಂಸ್ಕರಣಾ ಯಂತ್ರೋಪಕರಣಗಳ ಉತ್ಪಾದನೆ ಹಾಗೂ ಶುದ್ಧ ಕುಡಿಯುವ ನೀರು ಯಂತ್ರಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ ಲಿ ಮತ್ತು ಕೈಗಾರಿಕಾ ಯಂತ್ರೋಪಕರಣಗಳ ಖರೀದಿಗೆ ಹಣಕಾಸು ನೆರವು ನೀಡುವ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಸಿಡ್ಬಿ) ನಡುವೆ ವ್ಯವಹಾರಿಕ ಒಪ್ಪಂದ ನಡೆಸಲಾಯಿತು.
ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ ಲಿ. ನ ಆಡಳಿತ ನಿರ್ದೇಶಕ ಡಾ. ಜಿ. ರಾಮಕೃಷ್ಣ ಆಚಾರ್ ಹಾಗೂ ಸಿಡ್ಬಿ ಬೆಂಗಳೂರು ವಲಯ ಮಹಾಪ್ರಬಂಧಕ ಶ್ರೀಪತಿ ಎಸ್. ಎಸ್‌ಕೆಎಫ್‌ನಲ್ಲಿ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದದಿಂದ ಎಸ್‌ಕೆಎಫ್ ಮೂಲಕ ಖರೀದಿಸುವ ಯಂತ್ರೋಪಕರಣಗಳಿಗೆ ಮೇಲಾಧಾರ ಮುಕ್ತವಾಗಿ ಸುಲಭ ರೀತಿಯಲ್ಲಿ ಹಣಕಾಸು ಸಾಲ ನೀಡುವುದಲ್ಲದೆ ಕೇಂದ್ರ ಸರ್ಕಾರದ ಸಬ್ಸಿಡಿಯನ್ನು ಒದಗಿಸಲಿದೆ. ಇದರಿಂದ ಹೊಸದಾಗಿ ರೈಸ್‌ಮಿಲ್ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಉದ್ಯಮಿಗಳ ವ್ಯವಹಾರಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎಸ್‌ಕೆಎಫ್‌ಗೆ ಯಂತ್ರೋಪಕರಣಗಳ ಖರೀದಿ ಬೇಡಿಕೆ ಹೆಚ್ಚಾಗಲಿದೆ.
ಒಪ್ಪಂದಕ್ಕೆ ಸಹಿ ಹಾಕಿದ ಸಿಡ್ಬಿಯ ಶ್ರೀಪತಿ ಎಸ್. ಮಾತನಾಡಿ ಎಸ್‌ಕೆಎಫ್‌ನಂತಹ ಹೆಸರಾಂತ ಕಂಪೆನಿಯು ಉತ್ಪಾದಿಸುವ ಯಂತ್ರೋಪಕರಣಗಳನ್ನು ಖರೀದಿಸುವ ಉದ್ಯಮಿಗಳಿಗೆ ಸಾಲಸೌಲಭ್ಯ ನೀಡಲು ನಾವು ಹೆಮ್ಮೆಪಡುತ್ತೇವೆ ಎಂದರು.
ಎಸ್‌ಕೆಎಫ್ ಎಲಿಕ್ಸರ್‌ನ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್ ಮಾತನಾಡಿ ಎಸ್‌ಕೆಎಫ್ ಮೂರುವರೆ ದಶಕದಲ್ಲಿ ರೈಸ್‌ಮಿಲ್ ಉದ್ಯಮದಲ್ಲಿನ ಬೇಡಿಕೆ ಮತ್ತು ಕಾಲಕ್ಕನುಗುಣವಾದ ಬದಲಾವಣೆಗೆ ಪೂರಕವಾದ ಯಂತ್ರೋಪಕರಣಗಳನ್ನು ಆವಿಷ್ಕರಿಸುವುದರಿಂದ ಈ ಕ್ಷೇತ್ರದಲ್ಲಿ ಕ್ರಾಂತಿಕಾರಕವಾದ ಬದಲಾವಣೆಯಾಗಿದೆ. ಜಗತ್ತಿನ ೨೩ಕ್ಕೂ ಅಧಿಕ ದೇಶಗಳಿಗೆ 5 ಸಾವಿರಕ್ಕೂ ಅಧಿಕ ಯಂತ್ರೋಪಕರಣಗಳನ್ನು ಒದಗಿಸಿದ್ದು ಅವುಗಳ ಗುಣಮಟ್ಟ, ಕಾರ್ಯಕ್ಷಮತೆಯಿಂದಾಗಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಈ ಒಪ್ಪಂದದಿಂದ ರೈಸ್‌ಮಿಲ್ ಉದ್ಯಮ ಕ್ಷೇತ್ರಕ್ಕೆ ಹೆಚ್ಚಿನಪ್ರಯೋಜನವಾಗಲಿದೆ.
ಉದ್ಯಮವನ್ನು ಕೇವಲ ಲಾಭದ ದೃಷ್ಟಿಯಿಂದ ನೋಡದೆ ಅದರಲ್ಲಿ ಪೂರ್ಣತೊಡಗಿಸಿಕೊಳ್ಳುವಿಕೆ, ಬದ್ಧತೆ, ಸೇವಾ ಮನೋಭಾವದಿಂದ ನಡೆಸಿದರೆ ಯಶಸ್ಸಿನತ್ತ ಸಾಗಬಹುದು ಎಂದರು.
ಮಂಗಳೂರಿನ ಹಿರಿಯ ಲೆಕ್ಕ ಪರಿಶೋಧಕ ಎಸ್‌ಎಸ್‌ನಾಯಕ್ ಎಸ್‌ಕೆಎಫ್ ಬೆಳೆದು ಬಂದ ಹಾದಿ ಹಾಗೂ ಈ ಒಪ್ಪಂದದಿಂದಾಗುವ ಪ್ರಯೋಜನವನ್ನು ವಿವರಿಸಿದರು. ಎಸ್‌ಕೆಎಫ್ ಎಲಿಕ್ಸರ್‌ನ ನಿರ್ದೇಶಕರಾದ ಪ್ರಜ್ವಲ್ ಆಚಾರ್, ತೇಜಸ್ ಆಚಾರ್, ಸಿಇಒ ಸುಮನ್ ಮುಖರ್ಜಿ ಉಪಸ್ಥಿತರಿದ್ದರು. ಸುಮನಾ ಕಾರ್ಯಕ್ರಮ ನಿರ್ವಹಿಸಿದರು. ಕವನಾ ವಂದಿಸಿದರು.