
ರೈ ಟ್ರಸ್ಟ್ ವತಿಯಿಂದ 250 ಕಡುಬಡವರಿಗೆ ಶೀಘ್ರ ಮನೆ ಲೋಕಾರ್ಫಣೆಗೆ ಸಿಎಂ-ಡಿಸಿಎಂ ಸಾಥ್
ಪುತ್ತೂರು: ಪುತ್ತೂರಿನ ರೈ ಎಸ್ಟೇಟ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ನಿವೇಶನಕ್ಕೆ ನೋಂದಣಿ ಮಾಡಿಸಿಕೊಂಡ 250 ಮಂದಿ ನಿವೇಶನ ರಹಿತ ಬಡಕುಟುಂಬಗಳಿಗೆ ನಿವೇಶನದ ಜತೆಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಈ ಮನೆಗಳ ಲೋಕಾರ್ಪಣೆ ಸಂದರ್ಭ ರಾಜ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮದ ಕಟ್ಟತ್ತಿಲದಲ್ಲಿ ಮನೆ ನಿರ್ಮಾಣವಾಗಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಮನೆ ನಿರ್ಮಾಣಕ್ಕೆ ಜಾಗ ಖರೀದಿ ಮಾಡಿದ್ದು ಆ ಜಾಗದಲ್ಲೇ ಮನೆ ನಿರ್ಮಾಣ ಕಾರ್ಯ ನಡೆಯಲಿದೆ. ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಅತ್ಯುತ್ತಮ ಪ್ರದೇಶವಾಗಿ ಇದನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಹೇಳಿದರು.
ಅಶೋಕ್ ರೈ ಅವರು ಶಾಸಕರಾಗುವ ಮೊದಲು ಅನೇಕ ಮಂದಿ ನಿವೇಶನ ಇಲ್ಲದವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಅರ್ಹ 250 ಕುಟುಂಬಗಳನ್ನು ಮೊದಲ ಕಂತಿನಲ್ಲಿ ಆಯ್ಕೆ ಮಾಡಲಾಗುತ್ತದೆ. ನಿವೇಶನ ರಹಿತ ವಿಧವೆಯರು, ಪತಿ ಅನಾರೋಗ್ಯದಿಂದ ಇದ್ದು ಬಾಡಿಗೆ ಮನೆಯಲ್ಲಿ ವಾಸ ಮಾಡುವವರು, ಯಾವುದೇ ಆರ್ಥಿಕ ಶಕ್ತಿಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿ ಮನೆ ಬಾಡಿಗೆಯನ್ನು ನೀಡಲು ಅಶಕ್ತರಾದ ಕುಟುಂಬಗಳು, ಪೂರ್ಣವಾಗಿ ಅಶಕ್ತ ಕುಟುಂಬಗಳಿಗೆ ಈ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತದೆ. ಶಾಸಕ ಅಶೋಕ್ ರೈ ಅವರೇ ತಮ್ಮ ಸ್ವಂತ ಖರ್ಚಿನಿಂದ 250 ಮನೆಗಳನ್ನು ನಿರ್ಮಿಸಿ ಕೊಡಲಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮದ ಕಟ್ಟತ್ತಿಲದಲ್ಲಿರುವ ನಿವೇಶನಕ್ಕೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಚರಂಡಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಒಂದೇ ಕಡೆ ಒಂದೇ ರೀತಿಯ 250 ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ.
ಬಡವರ್ಗ ಹಾಗೂ ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡುವುದು ಶಾಸಕರಾಗುವ ಮೊದಲೇ ಅಶೋಕ್ ರೈ ಅವರ ಕನಸಾಗಿತ್ತು. ಶಾಸಕರಾದ ಬಳಿಕ ಬಡವರಿಗೆ ನಿವೇಶನದ ಜೊತೆಗೆ ಅದರಲ್ಲೇ ಮನೆ ನಿರ್ಮಾಣ ಮಾಡಿಕೊಡುತ್ತಿರುವುದು ನಮಗೆಲ್ಲಾ ಸಂತೋಷ ತಂದಿದೆ. ಶಾಸಕರ ಕನಸು ನನಸಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ ನಿವೇಶನ ರಹಿತರಿಗೆ ಶಾಸಕರ ಮೂಲಕ ನಿವೇಶನ ದೊರಕಲಿದೆ ಎಂದು ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.
ವಾಸ್ತವ್ಯಯೋಗ್ಯ ಮನೆಗಳು
ನಾನು ಶಾಸಕನಾಗುವ ಮೊದಲು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಅತೀ ಕಡುಬಡ ಕುಟುಂಬಗಳನ್ನು ನಮ್ಮ ಟ್ರಸ್ಟ್ ಮೂಲಕ ಆಯ್ಕೆ ಮಾಡಲಾಗಿದೆ. ಮೊದಲಿಗೆ 160 ರಿಂದ 240 ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಎಲ್ಲೋ ಗುಡ್ಡದಲ್ಲಿ ಮನೆ ಕಟ್ಟಿ ಅಲ್ಲಿ ಕುಳಿತುಕೊಳ್ಳಿ ಎಂದು ಹೇಳುವುದಿಲ್ಲ. ಮೂಲಭೂತ ಸೌಕರ್ಯಗಳ ಸಹಿತ ವಾಸ್ತವ್ಯಯೋಗ್ಯ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ- ಅಶೋಕ್ ರೈ