
ಪೈಪ್ ಅಳವಡಿಕೆಗೆ ಅಗೆದ ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸುವಂತೆ ನ.ಪಂ. ಸದಸ್ಯರ ಒತ್ತಾಯ: ರಸ್ತೆ ಸರಿಪಡಿಸುವಂತೆ ಶಾಸಕರು ಸೂಚನೆ
ಸುಳ್ಯ: ಸುಳ್ಯ ನಗರಕ್ಕೆ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ರಸ್ತೆಯ ಬದಿಯಲ್ಲಿ ತೆಗೆಯಲಾದ ಹೊಂಡವನ್ನು ಸಮರ್ಪಕವಾಗಿ ಮುಚ್ಚಬೇಕು, ಅಗೆದ ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸಬೇಕು ಎಂದು ನಗರ ಪಂಚಾಯತ್ ಸದಸ್ಯರು ಒತ್ತಾಯಿಸಿದ ಘಟನೆ ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಲಾಯಿತು.
ಅಗೆಯಲಾದ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಇಂಜಿನಿಯರ್‌ಗಳಿಗೆ ಸೂಚಿಸಿದರು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನ.ಪಂ. ಸದಸ್ಯ ಕೆ.ಎಸ್. ಉಮ್ಮರ್ ನಗರದಲ್ಲಿ ಒಂದೇ ಒಂದು ಕೆಲಸ ಆಗ್ತಾ ಇಲ್ಲಾ. ಜನರಿಗೆ ನಗರದಲ್ಲಿ ನಡೆದಾಡಲು ಆಗ್ತಾ ಇಲ್ಲ. ನಗರದಲ್ಲಿ ಏನಾಗುತ್ತಾ ಇದೆ ಅಂತಾ ಅಧಿಕಾರಿಗಳಿಗೆ ಗೊತ್ತಿದೆಯಾ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮಳೆ ಆರಂಭಗೊಂಡ ಬಳಿಕ ಜನರಿಗೆ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಜನರು ಹಿಡಿ ಶಾಪ ಹಾಕುತ್ತಾ ಇದ್ದಾರೆ. ಆಡಳಿತ, ಅಧಿಕಾರಿಗಳು ಏನು ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿದ ಅವರು ಎಂಟು ತಿಂಗಳಿನಿಂದ ರಸ್ತೆ ಬದಿ ಹಾಗೂ ರಸ್ತೆ ಅಗೆದು ಹಾಕಿ ದುರಸ್ತಿ ಮಾಡಿಲ್ಲ ಎಂದು ಸಭೆಯಲ್ಲಿಯೇ ಧರಣಿ ನಡೆಸಲು ಮುಂದಾದರು.
ಕಾಮಗಾರಿಯ ಉಸ್ತುವಾರಿ ವಹಿಸುವ ಒಳ ಚರಂಡಿ ಮಂಡಳಿಯ ಇಂಜಿನಿಯರ್‌ಗಳು ಸಭೆಗೆ ಬರಲಿದ್ದಾರೆ ಬಳಿಕ ಚರ್ಚಿಸುವ ಎಂದು ಅಧ್ಯಕ್ಷರು ಹೇಳಿದರು. ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್‌ಗಳು ಸಭೆಗೆ ಆಗಮಿಸಿದರು. ಅಮೃತ್ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನಡೆಸಲಾದ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿಯಿಂದ ಹಾಳಾದ ರಸ್ತೆಯನ್ನು ಸರಿಪಡಿಸಬೇಕು ಎಂದು ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಎಂ.ವೆಂಕಪ್ಪ ಗೌಡ, ಕೆ.ಎಸ್. ಉಮ್ಮರ್, ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಶಿಲ್ಪಾ ಸುದೇವ್, ಬಾಲಕೃಷ್ಣ ರೈ ಮತ್ತಿತರರು ಈ ವಿಷಯದಲ್ಲಿ ಮಾತನಾಡಿದರು. ಪೈಪ್ ಅಳವಡಿಕೆ ಕಾಮಗಾರಿಗೆ ಅಗೆದ ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಇಂಜಿನಿಯರ್‌ಗೆ ಸೂಚಿಸಿದರು.
ರಸ್ತೆ ದುರಸ್ತಿ ಕಾರ್ಯ ಶೀಘ್ರ ನಡೆಸುವುದಾಗಿ ಒಳಚರಂಡಿ ಮಂಡಳಿಯ ಇಂಜಿನಿಯರ್ ಅಜಯ್ ಭರವಸೆ ನೀಡಿದರು. ಸುಳ್ಯದ ವಿದ್ಯುತ್ ಸಮಸ್ಯೆ ಪರಿಹರಿಸಬೇಕು. 110 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಬೇಕು ಎಂದು ಸದಸ್ಯ ಎಂ. ವೆಂಕಪ್ಪ ಗೌಡ ಹೇಳಿದರು.
ವಿದ್ಯುತ್ ಸಮಸ್ಯೆ ಸರಿಪಡಿಸುವ ಕುರಿತು ಮೆಸ್ಕಾಂ ಎಂಡಿ ಜೊತೆ ಚರ್ಚೆ ನಡೆಸಲಾಗಿದೆ. 110 ಕೆವಿ ಸಬ್ ಸ್ಟೇಷನ್ ಹಾಗೂ ಲೈನ್ ಕಾಮಗಾರಿ ಪ್ರಗತಿ ಕುರಿತು ಕೆಪಿಟಿಸಿಎಲ್, ಮೆಸ್ಕಾಂ, ಜನಪ್ರತಿನಿಧಿಗಳು ಹಾಗೂ ರೈತರ ಸಭೆ ಕರೆಯುವುದಾಗಿ ಶಾಸಕರು ಹೇಳಿದರು.
ಉಪಾಧ್ಯಕ್ಷ ಬುದ್ಧ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಠ್, ನ.ಪಂ. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಉಪಸ್ಥಿತರಿದ್ದರು.