
ಕೆಂಪು ಕಲ್ಲು, ಮರಳು ಲಭ್ಯತೆಗೆ ಸರಳ ಕಾನೂನು ರೂಪಿಸಲು ವಿವಿಧ ಸಂಘಟನೆಗಳ ಅಗ್ರಹ
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು, ಕೆಂಪು ಕಲ್ಲಿಗೆ ಅಲಭ್ಯತೆ ಉಂಟಾಗಿ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಿದೆ. ಇದರಿಂದ ಕಾರ್ಮಿಕರು, ಗುತ್ತಿಗೆದಾರರು, ಸಾರ್ವಜನಿಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಆದುದರಿಂದ ಕೆಂಪು ಕಲ್ಲು, ಮರಳು ಲಭ್ಯತೆಗೆ ಮತ್ತು ಸಾಗಾಟಕ್ಕೆ ಜನರಿಗೆ ಅನುಕೂಲವಾಗುವಂತೆ ಸರಕಾರ ಸರಳ ಕಾನೂನು ರೂಪಿಸಬೇಕು ಎಂದು ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೇಳಿದ್ದಾರೆ.
ಸುಳ್ಯ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಗುತ್ತಿಗೆದಾರರ ಸಂಘದ ಸುಬೋದ್ ಶೆಟ್ಟಿ ಮೇನಾಲ ನಮ್ಮ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ಲಭ್ಯತೆಗೆ ಸಮಸ್ಯೆ ಉಂಟಾಗಿದ್ದು ಇದರಿಂದ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದು ಗುತ್ತಿಗೆದಾರರು, ಕಾರ್ಮಿಕರು, ಲಾರಿ ಚಾಲಕರು ಮತ್ತಿತರರಿಗೆ ಕೆಲಸ ಇಲ್ಲದ ಸ್ಥಿತಿ ಉಂಟಾಗಿದೆ. ಇದರಿಂದ ಅಭಿವೃದ್ಧಿ ಕೆಲಸಗಳಿಗೂ ಸಮಸ್ಯೆ ಎದುರಾಗಿದೆ. ಆದುದರಿಂದ ಮರಳು ಮತ್ತು ಕೆಂಪು ಕಲ್ಲು ಲಭ್ಯತೆ, ಸಾಗಾಟ ಸಂಬಂಧಪಟ್ಟ ಕಾನೂನು ಸರಳೀಕರಣ ಮಾಡಬೇಕು. ಸ್ಥಳೀಯವಾಗಿ ಕೆಂಪು ಕಲ್ಲು ಮತ್ತು ಮರಳು ತೆಗೆಯಲು ಮತ್ತು ಸಾಗಾಟ ಮಾಡುವ ನಿಟ್ಟಿನಲ್ಲಿ ಸರಳ ಕಾನೂನು ರೂಪಿಸಬೇಕು ಎಂದು ಹೇಳಿದರು.
ಕಡಿಮೆ ವಿಸ್ತೀರ್ಣದಲ್ಲಿಯೂ ಮರಳು ಬ್ಲಾಕ್ಗಳನ್ನು ರೂಪಿಸಿ ಸ್ಥಳೀಯವಾಗಿ ಮರಳು ತೆಗೆಯಲು ಅವಕಾಶ ನೀಡಬೇಕು, ಕೆಂಪು ಕಲ್ಲು ಮತ್ತು ಮರಳು ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈ ಹಿನ್ನಲೆಯಲ್ಲಿ ಎಲ್ಲಾ ಶಾಸಕರು, ಸಚಿವರು ಹಾಗೂ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಶಾಸಕರು, ಸಚಿವರುಗಳು ಸರಕಾರಿ ಮಟ್ಟದಲ್ಲಿ ಪ್ರಯತ್ನ ನಡೆಸಿ ಸೂಕ್ತ ಕಾನೂನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಲಾರಿ ಮಾಲಕ ಮತ್ತು ಚಾಲಕ ಸಂಘದ ದಿನೇಶ್ ಅಡ್ಕಾರ್, ಬಿಎಂಎಸ್ ಸಂಘಟನೆಯ ಮಧುಸೂಧನ್, ಕೆಂಪು ಕಲ್ಲು ಕೋರೆ ಮತ್ತು ಲಾರಿ ಮಾಲಕರ ಸಂಘದ ಪ್ರಕಾಶ್ ಅಡ್ಕಾರ್, ಕಾರ್ಮಿಕ ಸಂಘಟನೆಯ ವಿಶ್ವನಾಥ ನೆಲ್ಲಿ ಬಂಗಾರಡ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮಸ್ಯೆಗಳನ್ನು ವಿವರಿಸಿದರು.
ಮನುದೇವ್ ಪರಮಲೆ, ರಾಜೇಶ್ ಕಿರಿಭಾಗ, ಕಿಟ್ಟಣ್ಣ ರೈ, ಅನಿಲ್ ಕುಮಾರ್ ಉಪಸ್ಥಿತರಿದ್ದರು.