
ಯುವಕ ಕಾಣೆ: ಜಕ್ರಿಬೆಟ್ಟು ಡ್ಯಾಂ ಬಳಿ ಬೈಕ್ ಪತ್ತೆ
Tuesday, July 29, 2025
ಬಂಟ್ವಾಳ: ತಾಲೂಕಿನ ಕಡೇಶಿವಾಲಯ ಗ್ರಾಮದ ಕೊರತಿಗುರಿ ನಿವಾಸಿ, ನೀರಿನ ಫಿಲ್ಟರ್ ರಿಪೇರಿ ಕೆಲಸ ಮಾಡುವ ಯುವಕನ ದ್ವಿಚಕ್ರ ವಾಹನ ಜಕ್ರಿಬೆಟ್ಟು ಡ್ಯಾಂ ಬಳಿ ಅನಾಥ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ.
ಈ ದ್ವಿಚಕ್ರ ವಾಹನ ವಶಪಡಿಸಿಕೊಂಡು ಮಾಹಿತಿ ಸಂಗ್ರಹಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಕಡೇಶಿವಾಲಯ ಗ್ರಾಮದ ಕೊರತಿಗುರಿ ನಿವಾಸಿ ಜಗದೀಶ್ ಆಚಾರ್ಯ ಅವರ ಪುತ್ರ ಹೇಮಂತ್ ಎಂಬವರಿಗೆ ಈ ಬೈಕ್ ಸೇರಿದ್ದಾಗಿದೆ ಎಂದು ಪತ್ತೆ ಹಚ್ಚಲಾಗಿದ್ದು, ಹೇಮಂತ್ ನಾಪತ್ತೆಯಾಗಿದ್ದಾರೆ.
ಅವಿವಾಹಿತನಾಗಿರುವ ಇವರು ಜುಲೈ 28 ರಿಂದ ನಾಪತ್ತೆಯಾಗಿರುವ ಬಗ್ಗೆ ಮಂಗಳವಾರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಕ್ರಿಬೆಟ್ಟು ನೇತ್ರಾವತಿ ವೆಂಟೆಡ್ ಡ್ಯಾಂ ಬಳಿ ಈತನ ದ್ವಿಚಕ್ರವಾಹನ, ಮೊಬೈಲ್ ಕಂಡುಬಂದಿದೆ.
ಹೇಮಂತ್ ಅವರು ನೀರಿನ ಫಿಲ್ಟರ್ ರಿಪೇರಿ ಕೆಲಸ ಮಾಡುತ್ತಿದ್ದು, ಸೋಮವಾರ ಕೆಲಸಕ್ಕೆಂದು ತೆರಳಿ ಬಳಿಕ ಮನೆಗೆ ಬಾರದೆ ಕಾಣೆಯಾಗಿದ್ದಾನೆ. ಈತ ತನ್ನ ದ್ವಿಚಕ್ರ ವಾಹನ ಜಕ್ರಿಬೆಟ್ಟು ಡ್ಯಾಂ ಬಳಿ ನಿಲುಗಡೆಗೊಳಿಸಿ ಕಾಣೆಯಾಗಿರುವುದರಿಂದ ಈತನ ಪತ್ತೆಗಾಗಿ ಗ್ರಾಮಾಂತರ ಪೊಲೀಸರು, ನಗರ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಮುಳುಗು ತಜ್ಣರು ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.