
ಬೈಂದೂರು: ಆ.3 ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನ ಹಾಗೂ ಗ್ರಾಮೀಣ ಸಂಸ್ಕೃತಿ ಸೊಗಡನ್ನು ಅನಾವರಣಗೊಳಿಸುವ ಉದ್ದೇಶದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ “ಗಮ್ಮತ್" ಕಾರ್ಯಕ್ರಮವನ್ನು ಅಗಸ್ಟ್ 3ರ ಭಾನುವಾರ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಜೆ.ಎನ್.ಆರ್. ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಹೇಳಿದರು.
ಅವರು ಬೈಂದೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಮಾನ ಮನಸ್ಕರ ತಂಡ ಒಂದುಗೂಡಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ಕಳೆದೊಂದು ವರ್ಷದಿಂದ ಅದ್ದೂರಿ ಕಾರ್ಯಕ್ರಮ ಆಯೋಜಿಸುತ್ತಾ ಬರಲಾಗುತ್ತಿದ್ದು, ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದ್ದು, ವಿಜೇತರಿಗೆ ನಗದು ಬಹುಮಾನ, ಪದಕ, ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿದೆ ಎಂದರು.
ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು:
ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ, ಕೆಸರ್ ಗದ್ದೆ ಓಟ, ಅಡಿಕೆ ಹಾಳೆಯಲ್ಲಿ ಕೂರಿಸಿ ಎಳೆಯುವುದು, ಬೀಸ್ ಬಲಿ ಬೀಸುದ್, ಚಿಟ್ ಬಿಟ್ ಶೂಟಿಂಗ್, ಅಪ್ಪ-ಮಗು ಉಪ್ಪು ಮೂಟೆ, ಚನ್ನೆಮಣೆ, ಸಾಂಪ್ರದಾಯಿಕ ಗೀತಗಾಯನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಮಹಿಳೆಯರಿಗೆ ಹಗ್ಗಜಗ್ಗಾಟ, ಥ್ರೋ ಬಾಲ್, ಕೆಸರ್ ಗದ್ದೆ ಓಟ, ಅಡಿಕೆ ಹಾಳೆಯಲ್ಲಿ ಕೂರಿಸಿ ಎಳೆಯುವುದು, ಮಡ್ಲ್ ನೇಯುವುದು, ಗುಡ್ನ ಆಟ, ಚನ್ನೆಮಣೆ ಆಟ, ಅಮ್ಮ-ಮಗು ಉಪ್ಪು ಮೂಟೆ, ಕಡುಬಿನ ಕೊಟ್ಟೆ ಸೆಡುದ್, ಹೂಮಾಲೆ ಕಟ್ಟುವುದು, ಸಾಂಪ್ರದಾಯಿಕ ಗೀತಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಕ್ಕಳಿಗೆ ಕೆಸರ್ ಗದ್ದೆ ಓಟ (1-7ನೇ ತರಗತಿ &8-12ನೇ ತರಗತಿ ವಿಭಾಗ), ಬೆನ್ ಚೆಂಡ್ ಆಟ (8 - 12ನೇ ತರಗತಿ), ಅಡಿಕೆ ಹಾಳೆಯಲ್ಲಿ ಕೂರಿಸಿ ಎಳೆಯುವುದು, ಲಿಂಬೆ ಚಮಚ ಓಟ (1-7ನೇ ತರಗತಿ & 8-12ನೇ ತರಗತಿ ವಿಭಾಗ), ಗೂಟಕ್ಕೆ ಸುತ್ತಿ ಓಡುವುದು (8-12ನೇ ತರಗತಿ), ಚಿತ್ರಕಲಾ ಸ್ಪರ್ಧೆ (ಎಲ್.ಕೆ.ಜಿ. -4ನೇ ತರಗತಿ, 5-7ನೇ ತರಗತಿ & 8-10ನೇ ತರಗತಿ ವಿಭಾಗ), ಕುಂದಾಪ್ರ ಕನ್ನಡ ಭಾಷಣ ಸ್ಪರ್ಧೆ (6-10ನೇ ತರಗತಿ) ಛದ್ಮಪೇಷ ಸ್ಪರ್ಧೆ (ಎಲ್.ಕೆ.ಜಿ.ಯಿಂದ -7ನೇ ತರಗತಿ) ಆಯೋಜಿಸಲಾಗಿದೆ. ತೆಂಗಿನ ಚೋಗೆಯಿಂದ ಮಾದರಿ ತಯಾರಿ, ರಸಪ್ರಶ್ನೆ ಸ್ಪರ್ಧೆಗಳು ಮುಕ್ತ ವಿಭಾಗದಲ್ಲಿ ನಡೆಯಲಿದೆ. ಸಾರ್ವಜನಿಕರು ಎಲ್ಲಾ ಸ್ಪರ್ಧೆಗಳಲ್ಲಿ ಉಚಿತವಾಗಿ ನೊಂದಣಿಯೊಂದಿಗೆ ಭಾಗವಹಿಸಬಹುದಾಗಿದೆ.
ಹಲವು ಕಾರ್ಯಕ್ರಮಗಳು:
ಅ.3ರ ಆದಿತ್ಯವಾರ ಬೆಳಗ್ಗೆ 9ಕ್ಕೆ ರಾಹುತನಕಟ್ಟೆಯಿಂದ ಜೆ.ಎನ್.ಆರ್. ಹಾಲ್ ತನಕ ವೈಭವದ ಮೆರವಣಿಗೆ ಇರಲಿದ್ದು, ಕಂಬಳ ಕೋಣಗಳು, ಭಜನಾ ತಂಡಗಳು, ಎತ್ತಿನಗಾಡಿ, ಯಕ್ಷಗಾನ ವೈಭವ, ಎರಡು ಚಂಡೆ ತಂಡಗಳು ಮೆರವಣಿಗೆ ಸೊಬಗು ಹೆಚ್ಚಿಸಲಿವೆ. ಕಂಬಳ ಕ್ಷೇತ್ರದ ದಿಗ್ಗಜ ದಿ. ವೆಂಕಟ ಪೂಜಾರಿ ಅವರ ನೆನಪಿನಲ್ಲಿ ಈ ಬಾರಿ ಕಂಬಳವನ್ನು ಆಯೋಜಿಸಲಾಗುತ್ತಿದ್ದು, ಬೆಳಿಗ್ಗೆಯಿಂದ 35 ಜೊತೆ ಕಂಬಳ ಕೋಣಗಳ ಆಕರ್ಷಕ ಓಟ ಇರಲಿದೆ. ಹಳೆ ಕಾಲದ ವಸ್ತು ಪ್ರದರ್ಶನ, ವಿವಿಧ ತಿನಿಸುಗಳ ಅಂಗಡಿಗಳು, ಸಿನಿ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿ, ಮನು ಹಂದಾಡಿ, ಚೇತನ್ ನೈಲಾಡಿ ಅವರ ಹಾಸ್ಯ ಚಟಾಕಿ, ಕುಂದಾಪ್ರ ಶೈಲಿಯಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ, ಸೆಲ್ಪಿ ಪಾಯಿಂಟ್, ಶವರ್ ಡಾನ್ಸ್, ಪಕ್ಕದ ಹೊಳೆಯಲ್ಲಿ ಕಯಾಕಿಂಗ್, ಬೋಟಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಉದ್ಘಾಟನಾ ಸಮಾರಂಭದ ಬಳಿಕ ಒಳಾಂಗಣ ಹಾಗೂ ಹೊರಂಗಾಣದಲ್ಲಿ ಏಕಕಾಲದಲ್ಲಿ ಸ್ಪರ್ಧೆಗಳು ನಡೆಯಲಿವೆ. ಮಕ್ಕಳ ಸ್ಪರ್ಧೆಗಳಿಗೆ ಬೆಳಿಗ್ಗೆ 9ರ ತನಕ ಸ್ಥಳದಲ್ಲಿಯೇ ನೊಂದಣಿ ಇರಲಿದೆ. ಬೆಳಿಗ್ಗೆಯಿಂದಲೇ ಎಲ್ಲಾ ಸ್ಪರ್ಧೆಗಳು ಆರಂಭವಾಗುವುದರಿಂದ ಸ್ಪರ್ಧಿಗಳು ಆರಂಭದಲ್ಲಿಯೇ ಹಾಜರಿರಬೇಕು. ಎಲ್ಲಾ ವಿಭಾಗದ ವಿಜೇತರಿಗೆ ಪದಕ, ಸರ್ಟಿಫಿಕೇಟ್ ಕೊಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯದರ್ಶಿ ಸುನಿಲ್ ಎಚ್.ಜಿ. ಸಂಚಾಲಕರಾದ ಸುಬ್ರಹ್ಮಣ್ಯ ಜಿ. ಉಪ್ಪುಂದ, ಅರುಣ್ ಕುಮಾರ್ ಶಿರೂರು, ಪ್ರಸಾದ್ ಪ್ರಭು ಶಿರೂರು, ಪ್ರಮುಖರಾದ ದಿವಾಕರ ಶೆಟ್ಟಿ ಉಪ್ಪುಂದ, ರಘುರಾಮ ಪೂಜಾರಿ ಶಿರೂರು, ಶೇಖರ ಪೂಜಾರಿ ಉಪ್ಪುಂದ, ಗೌರಿ ದೇವಾಡಿಗ, ಗಣೇಶ್ ಕೊಠಾರಿ, ಸವಿತಾ ದಿನೇಶ್, ಪ್ರಭಾಕರ ಶೆಟ್ಟಿ, ಅನುರ್ ಮೆಂಡನ್, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಕಿಶೋರ್ ಸಸಿಹಿತ್ತು ಮೊದಲಾದವರು ಉಪಸ್ಥಿತರಿದ್ದರು.