ದ.ಕ ಜಿಲ್ಲೆಯಲ್ಲಿ ಮಳೆ ಕ್ಷೀಣ
ಮಂಗಳೂರು: ಕಳೆದ ಒಂದೆರಡು ದಿನಗಳಿಂದ ಕರಾವಳಿಯಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಗುರುವಾರ ಉತ್ತಮ ಬಿಸಿಲು ಸಹಿತ ಅಲ್ಪ ಮಳೆಯ ಸಿಂಚನವಾಗಿದೆ.
ಸುಳ್ಯ, ಕಡಬ ತಾಲೂಕಿನ ಹಲವೆಡೆ ದಿನಪೂರ್ತಿ ಬಿಸಿಲು ಸಹಿತ ಕೆಲವೊಮ್ಮೆ ಹನಿ ಮಳೆಯಾಗಿದೆ. ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಸುತ್ತಮುತ್ತ ಸಂಜೆ ವೇಳೆ ಸಾಧಾರಣ ಗುಡುಗು ಸಹಿತ ಮಳೆಯಾಗಿದೆ. ಪುತ್ತೂರು ಪೇಟೆಯಲ್ಲಿ ಹನಿ ಮಳೆಯಾದರೆ ಕೆಲವು ಕಡೆ ಸಿಡಿಲು ಸಹಿತ ಮಳೆಯಾಗಿದೆ. ಶುಕ್ರವಾರ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮುಂಗಾರು ದುರ್ಬಲಗೊಂಡಿದ್ದರೂ ಆ.3ರ ತನಕ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ನಂತರ ಮೋಡ ಹಾಗೂ ಬಿಸಿಲಿನ ವಾತಾವರಣದ ಸಾಧ್ಯತೆಗಳಿದ್ದರೂ, ಆಗಸ್ಟ್ 7ರ ಸಮಯದಲ್ಲಿ ತಮಿಳುನಾಡು ಕರಾವಳಿ ಸಮೀಪ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.ಈ ಹಿನ್ನೆಲೆಯಲ್ಲಿ ಆಗಸ್ಟ್ 2ನೇ ವಾರದಲ್ಲಿ ಮಳೆಯಾಗುವ ಸಾದ್ಯತೆ ಹೆಚ್ಚಿದೆ.
ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 15 ಮಿಮೀ ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 19.1ಮಿಮೀ, ಬಂಟ್ವಾಳ 10.6 ಮಿಮೀ, ಮಂಗಳೂರು 6.5 ಮಿಮೀ, ಪುತ್ತೂರು 8.5 ಮಿಮೀ, ಸುಳ್ಯ 14.3 ಮಿಮೀ, ಮೂಡುಬಿದಿರೆ 22.2 ಮಿಮೀ, ಕಡಬ 16.4. ಮಿಮೀ, ಮೂಲ್ಕಿ 10.7 ಮಿಮೀ, ಉಳ್ಳಾಲದಲ್ಲಿ 6 ಮಿಮೀ ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಳವಾಗಿರುವುದರಿಂದ ಕಡಲತೀರ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 33.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಶುಕ್ರವಾರ ವೇಳೆ ತುಸು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.