ಪ್ರಥಮ ಚಿಕಿತ್ಸೆ ಕುರಿತಾದ ಪ್ರಾತ್ಯಕ್ಷಿಕೆ ಆಧಾರಿತ ಮಾಹಿತಿ ಕಾರ್ಯಕ್ರಮ
Thursday, July 31, 2025
ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಹಾಗೂ ಜ್ಯೂನಿಯರ್ ರೆಡ್ ಕ್ರಾಸ್ ವಿಭಾಗ ಸ.ಪ.ಪೂ ಕಾಲೇಜು ಕುಂದಾಪುರ ಇವುಗಳ ಸಹಯೋಗದೊಂದಿಗೆ “ಪ್ರಥಮ ಚಿಕಿತ್ಸೆ ಕುರಿತಾದ ಪ್ರಾತ್ಯಕ್ಷಿಕೆ ಆಧಾರಿತ ಮಾಹಿತಿ ಕಾರ್ಯಕ್ರಮ” ವನ್ನು ನಡೆಸಲಾಯಿತು. ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯ ಹಾಗೂ ಪ್ರಥಮ ಚಿಕಿತ್ಸಾ ತರಬೇತುದಾರರೂ ಆಗಿರುವ ಡಾ. ಸೋನಿ ರವರು ವಿದ್ಯಾರ್ಥಿಗಳಿಗೆ ಆಕಸ್ಮಿಕ ಅವಘಡಗಳಾದಾಗ ಯಾವ ರೀತಿಯ ಪ್ರಾಥಮಿಕ ಚಿಕಿತ್ಸೆಯನ್ನು ನೀಡಬೇಕೆಂದು ವಿವರಿಸಿದರು. ಜೊತೆಗೆ ಸಿ.ಪಿ.ಆರ್. ಕುರಿತಾಗಿ ವಿದ್ಯಾರ್ಥಿಗಳನ್ನೊಳಗೊಂಡು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಹಾಗೂ ಖಜಾಂಚಿ ಶಿವರಾಮ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ವನಿತಾ ನಾಯ್ಕ ಸ್ವಾಗತಿಸಿದರು. ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಸಂಚಾಲಕ ರಾಜೇಶ್ ಹೆಬ್ಬಾರ್ ವಂದಿಸಿದರು. ಸ್ವಯಂ ಸೇವಕ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರುಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.