
ಗಂಗೊಳ್ಳಿ ಶಿಶು ಮಂದಿರ: ಪಾಲಕರೊಂದಿಗೆ ಸಮಾಲೋಚನೆ
Thursday, July 31, 2025
ಗಂಗೊಳ್ಳಿ: ಜಗತ್ತಿನಲ್ಲಿ ನಮ್ಮ ದೇಶ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ನಮ್ಮ ದೇಶ ಉತ್ತಮವಾಗಿದ್ದರೆ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರಗಳನ್ನು ಉತ್ತೇಜಿಸಿ, ಮಕ್ಕಳಿಗೆ ಇದಕ್ಕೆ ಪೂರಕವಾದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಶಿಶು ಮಂದಿರಗಳು ಸ್ಥಾಪಿತವಾಗಿವೆ. ಕುಟುಂಬ, ಸಮಾಜ, ಗ್ರಾಮ, ರಾಜ್ಯ ಹಾಗೂ ದೇಶದಲ್ಲಿ ನಮ್ಮ ಧರ್ಮ, ಸಂಸ್ಕಾರ, ಸಂಸ್ಕೃತಿಗಳು ಗಟ್ಟಿಯಾಗಿ ಬೇರೂರಿ ಬೆಳೆದು ನಿಲ್ಲಲು ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಇದಕ್ಕೆ ಪೂರಕವಾದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕುಂದಾಪುರ ಸೇವಾ ಸಂಗಮ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.
ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾ ಭವನದಲ್ಲಿ ಗುರುವಾರ ಪಾಲಕರ ಮಿಲನ ಕಾರ್ಯಕ್ರಮ, ಪಾಲಕರೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.
ಶಿಶು ಮಂದಿರದ ಅಧ್ಯಕ್ಷ ಬಿ. ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಂಗಮ ಟ್ರಸ್ಟ್ ವಿಶ್ವಸ್ಥರಾದ ಚಂದ್ರಿಕಾ ಧನ್ಯ, ಕಲ್ಪನಾ ಭಾಸ್ಕರ, ಶಿಶು ಮಂದಿರದ ಸದಸ್ಯರಾದ ಸವಿತಾ ಯು.ದೇವಾಡಿಗ, ಶ್ರೀನಿವಾಸ ಎಂ., ಭಾಸ್ಕರ ಎಚ್.ಜಿ., ವಸಂತಿ ಎನ್. ಖಾರ್ವಿ, ಗಾಯತ್ರಿ ಕೊಡಂಚ, ಮಾತಾಜಿ ಪ್ರೇಮಾ, ರತ್ನ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ ಬಿ. ರಾಘವೇಂದ್ರ ಪೈ ಸ್ವಾಗತಿಸಿದರು. ಸಂಚಾಲಕ ಡಾ. ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಅಧ್ಯಕ್ಷ ಬಿ. ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಶ್ವಿತಾ ಜಿ. ಪೈ ವಂದಿಸಿದರು.