ವಿದ್ಯಾರ್ಥಿಗಳಲ್ಲಿ ಗುರಿ ಮತ್ತು ಪ್ರಯತ್ನ ಮುಖ್ಯ: ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಂ ಶಂಕರ್

ವಿದ್ಯಾರ್ಥಿಗಳಲ್ಲಿ ಗುರಿ ಮತ್ತು ಪ್ರಯತ್ನ ಮುಖ್ಯ: ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಹರಿರಾಂ ಶಂಕರ್


ಕುಂದಾಪುರ: ವಿದ್ಯಾರ್ಥಿಗಳು ಉದ್ಯಾನವನದಲ್ಲಿರುವ ಬೇರೆ ಬೇರೆ ಜಾತಿ ಹೂವುಗಳಂತೆ. ಪ್ರತಿಯೊಬ್ಬರೂ ವಿಶಿಷ್ಟರಾಗಿದ್ದೀರಿ. ಬೇರೆಯವರಿಗೆ ಹೋಲಿಕೆ ಮಾಡುವ ಅವಶ್ಯಕತೆ ಇಲ್ಲ. ಅಡ್ಡದಾರಿ ಹಿಡಿಯದೆ ಒಳ್ಳೆಯ ಗುರಿ ಹೊಂದಿ ಸಾಧಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.

ಯಡಾಡಿ-ಮತ್ಯಾಡಿಯ ಸುಜ್ಞಾನ–ವಿದ್ಯಾರಣ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಸತ್ತು ಪದಗ್ರಹಣ ನೆರವೇರಿಸಿ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಯಕತ್ವ ಗುಣ ಹೇಗಿರಬೇಕು ಅಂದರೆ ಹಿರಿಯ ದಕ್ಷ ಪೊಲೀಸ್ ಅಧಿಕಾರಿ ದಿವಂಗತ ಡಾ. ಮಧುಕರ್ ಶೆಟ್ಟಿ  ಅವರ ಆದರ್ಶವನ್ನು ನಾವು ಆಳವಡಿಸಿಕೊಳ್ಳಬೇಕು.

ವಿದ್ಯಾರ್ಥಿಗಳಲ್ಲಿ ಗುರಿ ಮತ್ತು ಪ್ರಯತ್ನ ಮುಖ್ಯ. ಯಾವುದೇ ವಿಚಾರದಲ್ಲಿ ಫೇಲಾದೆ ಅಂತ ಬಿಟ್ಟು ಬಿಡಬೇಡಿ. ಮತ್ತೆ ಪ್ರಯತ್ನ ಮಾಡಿ, ನಿಮ್ಮ ಗುರಿ ಸಾಧಿಸಿಕೊಳ್ಳಿ.

ವಿದ್ಯಾರ್ಥಿ ನಾಯಕರುಗಳು ಕೂಡ ಎಲ್ಲರ ಅಗತ್ಯಗಳನ್ನು ಅರಿತು ಅವರ ಸಮಸ್ಯೆ ಪರಿಹಾರ ಮಾಡುವತ್ತ ಪ್ರಯತ್ನಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ತಪ್ಪುಗಳು ಸಹಜ. ಆದರೆ ಅಂತಹ ತಪ್ಪುಗಳಿಂದ  ಬ್ಲಾಕ್ ಮೇಲ್ ಗೆ ಒಳಗಾಗುವ ಸಂದರ್ಭದಲ್ಲಿ ತಾವು ಧೃತಿಗೆಡದೆ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕು.

ಪೊಲೀಸ್ ಇಲಾಖೆ ಬಗ್ಗೆ ನಿಮಗೆ ಗೌರವ ಭಾವನೆ ಇರಬೇಕು. ಕಳ್ಳರು ಮತ್ತು ಕ್ರಿಮಿನಲ್ ಗಳು ಮಾತ್ರ ಪೊಲೀಸ್ ಬಗ್ಗೆ ಭಯಪಡುತ್ತಾರೆ. ಆದರೆ ನ್ಯಾಯದ ದಾರಿಯಲ್ಲಿ ನಡೆಯುವವರು ಯಾವತ್ತೂ ಪೊಲೀಸ್ ಬಗ್ಗೆ ಭಯ ಪಡುವ ಅಗತ್ಯ ಇಲ್ಲಾ. ಇಂಟರ್ನೆಟ್ ಮತ್ತು ಅಂತರ್ಜಾಲದಿಂದ, ಇವತ್ತು ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಿಮ್ಮ ಜೊತೆಗೆ ಪೊಲೀಸ್ ಇಲಾಖೆ ಸದಾ ಜವಾಬ್ದಾರಿಯುತವಾಗಿ  ಕಾರ್ಯನಿರ್ವಹಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಸುಜ್ಞಾನ್ ಎಜುಕೇಷನಲ್ ಟ್ರಸ್ಟ್  ನ ಅಧ್ಯಕ್ಷ ರಮೇಶ್ ಶೆಟ್ಟಿ ಮಾತನಾಡಿ ಒಳ್ಳೆಯ ಮನಸ್ಸುಗಳನ್ನು ಪ್ರತಿಯೊಬ್ಬರೂ ಹೊಂದಬೇಕು. ನಮ್ಮ ಶಾಲೆಗೆ ಯಾವಾಗಲೂ ರೋಲ್ ಮಾಡೆಲ್ ವ್ಯಕ್ತಿಗಳನ್ನು ಕರೆಸುತ್ತೇವೆ. ಏಕತೆ ಮತ್ತು ಪಾರದರ್ಶಕತೆಯಿಂದ ಪ್ರತಿಯೊಬ್ಬರ ಬಗ್ಗೆಯೂ ಗೌರವ ಹೊಂದಬೇಕು. ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಕಾನೂನು ಅರಿವನ್ನು ಹೊಂದಬೇಕು. ಮಾದಕ ವಸ್ತುಗಳು ಹಾಗೂ ಕೆಟ್ಟ ಹವ್ಯಾಸಗಳಿಂದ ದೂರ ಇರಬೇಕು. ಮೊಬೈಲ್ ಬ್ರಹ್ಮಾಂಡ ತೋರಿಸುತ್ತೆ. ಆದರೆ ಅದರಲ್ಲಿ ಏನನ್ನು ಪಡೆದುಕೊಳ್ಳಬೇಕೊ ಅದನ್ನು ಮಾತ್ರ ಪಡೆದುಕೊಳ್ಳಬೇಕೆಂದು ಸಲಹೆ ಮಾಡಿದರು.

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ತಮಗೆ ದೊರಕಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಮಾದರಿಯಾಗಬೇಕು. ಸೋಶಿಯಲ್ ಮಿಡಿಯಾಗಳನ್ನು ಕಂಡು ಭಾವನೆಗಳನ್ನು ಕೆಡಿಸಿಕೊಳ್ಳುವುದು ಸರಿಯಲ್ಲ. ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನದಲ್ಲಿ ನಮಗೆ ಒಳ್ಳೆಯದೇ ಆಗಲಿದೆ ಎಂದರು.

ಕೋಶಾಧಿಕಾರಿ ಭರತ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. 

ಪ್ರಾಂಶುಪಾಲ ರಂಜನ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ನಾಯಕಿ  ಪ್ರಕೃತಿ ಪಿ. ಶೆಟ್ಟಿ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ವಿದ್ಯಾರ್ಥಿ ಉಪ ನಾಯಕ ಸಮರ್ಥ್ ಶೆಟ್ಟಿ, ಪ್ರತೀಕ್ಷಾ ಮಡಿವಾಳ, ದಶಮಿ ಯು.ಶೆಟ್ಟಿ, ಸಂಜನಾ ಉಮೇಶ್, ಬ್ರಾಹ್ಮಿ ಆರ್.ಶೆಟ್ಟಿ, ಶ್ರಾವಣಿ ಜಿ.ಭಟ್, ತೇಜಸ್ವಿನಿ ಶೆಟ್ಟಿ, ಕೌಶಿಕ್ ರನ್ನೊಳಗೊಂಡ ವಿದ್ಯಾರ್ಥಿ ಸಂಘ ಪದಾಧಿಕಾರಿಗಳಿಗೆ 

ವಿದ್ಯಾರಣ್ಯ ಆಂಗ್ಲ ಮಾದ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ ಶೆಟ್ಟಿ  ಪ್ರಮಾಣ ವಚನ ಬೋಧಿಸಿದರು.

ಶಿಕ್ಷಕ ವಿನಯ ಕುಮಾ‌ರ್ ಕೆ.ನಿರೂಪಿಸಿ,  ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article